ಗುಬ್ಬಿ: ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪ್ರತಿಭಾ ಕಾರಂಜಿಗಳು ಪೂರಕ ಎಂದು ಪಟ್ಟಣ ಪಂಚಾಯತಿ ಸದಸ್ಯ ರಂಗಸ್ವಾಮಿ ತಿಳಿಸಿದರು.
ಪಟ್ಟಣದ ಶುಭೋದಯ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರತಿಭಾಕಾರಂಜಿಯಲ್ಲಿ ಭಾಗವಹಿಸಿದ ಮಕ್ಕಳು ಉತ್ತಮ ಪ್ರದರ್ಶನ ನೀಡುವ ಮೂಲಕ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿ ಶಾಲೆಗಳಿಗೆ ಕೀರ್ತಿ ತರಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಇಸಿಓ ದೀಪಕ್ ಕುಮಾರ್ ಶೆಟ್ಟಿ ಮಾತನಾಡಿ, ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರ ತೆಗೆಯಲು, ಪ್ರೋತ್ಸಾಹಿಸಲು ಈ ಕಾರ್ಯಕ್ರಮಗಳು ಅಗತ್ಯವಾಗಿ ಬೇಕಾಗಿದೆ ಎಂದರು.
ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಜಗದೀಶ್ ಮಾತನಾಡಿ, ಪ್ರತಿಭಾ ಕಾರಂಜಿ ಒಂದು ಶೈಕ್ಷಣಿಕ ಕಾರ್ಯಕ್ರಮವಾಗಿದ್ದು ವಿವಿಧ ಸಾಂಸ್ಕೃತಿಕ,ಕ್ರೀಡಾ, ಸಾಹಿತ್ಯಿಕ ಕ್ರೀಡೆಗಳನ್ನು ನಡೆಸಲಾಗುತ್ತದೆ. ಇಲ್ಲಿ ಆಯ್ಕೆಯಾಗುವ ವಿದ್ಯಾರ್ಥಿಗಳು ಬ್ಲಾಕ್, ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ತಮ್ಮದೇಯಾದ ಕಲೆಯನ್ನು ಪ್ರದರ್ಶಿಸುವ ಅವಕಾಶ ಇಲಾಖೆ ಮಾಡಿಕೊಡುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಪ.ಪಂ.ಸದಸ್ಯ ಜಿ ಆರ್ ಶಿವಕುಮಾರ್, ಸಿ ಆರ್ ಪಿ ನಾಗಭೂಷಣ್, ಶುಭೋದಯ ಶಾಲೆಯ ಮುಖ್ಯಸ್ಥರಾದ ಅಮರ್, ಇಸಿಓ ನಿಜಾನಂದಮೂರ್ತಿ, ಬಿ ಆರ್ ಪಿ ವಾಸಿಂ, ಪಿಎಂಶ್ರೀ ಶಾಲೆ ಎಸ್ ಡಿ ಎಂ ಸಿ ಅಧ್ಯಕ್ಷ ಆನಂದ್, ಕನ್ನಡ ಸಾಹಿತ್ಯ ಪರಿಷತ್ ಕೋಶಾಧ್ಯಕ್ಷರಾದ ಸುಬ್ರಮಣ್ಯ, ರಾಜ್ಯೋತ್ಸವ ಪ್ರಶಸ್ತಿ ವಿಜೇತ ಶಿಕ್ಷಕಿ ಸಿಂಧೂ, ಶಿಕ್ಷಕರಾದ ನಟರಾಜು, ರಘುನಾಥ್ ವಿವಿಧ ಶಾಲೆಯ ಮಕ್ಕಳು, ಶಿಕ್ಷಕರು ಮುಂತಾದವರು ಹಾಜರಿದ್ದರು.





