
ಗುಬ್ಬಿ : ನ್ಯಾಯಬೆಲೆ ಅಂಗಡಿಗಳ ಮಾಲೀಕರು ಮಾನವೀಯತೆಯಿಂದ ಕೆಲಸ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಶುಭಕಲ್ಯಾಣ ತಿಳಿಸಿದರು .
ತಾಲ್ಲೂಕಿನ ಜಿ.ಹೊಸಹಳ್ಳಿ ಗ್ರಾಮದಲ್ಲಿ ಮೊದಲ ಬಾರಿಗೆ ಆಹಾರ ಆದಾಲತ್ ಕಾರ್ಯವನ್ನು ಉದ್ಘಾಟಿಸಿ ಮಾತನಾಡಿ ನ್ಯಾಯ ಬೆಲೆ ಅಂಗಡಿಯವರು ಮಾನವೀಯತೆಯ
ಮೌಲ್ಯಗಳನ್ನು ಗಮನದಲ್ಲಿಟ್ಟುಕೊಂಡು ಪಡಿತರ ಆಹಾರವನ್ನು ವಿತರಣೆ ಮಾಡಿದಾಗ ಎಲ್ಲಾ ಜನರಿಗೆ ಪಡಿತರ ಆಹಾರ ದೊರೆಯುತ್ತದೆ.
ಸರ್ಕಾರವು ಆಹಾರ ಅದಲತ್ ಕಾರ್ಯಕ್ರಮವನ್ನು ಮಾಡಲು ತೀರ್ಮಾನಿಸಿದ್ದು, ತುಮಕೂರು ಜಿಲ್ಲೆಯಲ್ಲಿ 50 ಹೋಬಳಿಯಲ್ಲಿ 1126 ನ್ಯಾಯಬೆಲೆ ಅಂಗಡಿಗಳಿದ್ದು, 7 ಲಕ್ಷಕ್ಕೂ ಹೆಚ್ಚು ಪಡಿತರ ಚೀಟಿದಾರರು ಇದ್ದಾರೆ. ಪಡಿತರದಾರರು ಯಾವುದೇ ಸಮಸ್ಯೆಗಳು ಕಂಡುಬಂದರೂ ಹೋಬಳಿ ಹಂತದಲ್ಲಿ ನಡೆಯುವ ಆಹಾರ ಅದಾಲತ್ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಕುಂದು ಕೊರತೆಗಳನ್ನು ಬಗೆಹರಿಸಿಕೊಳ್ಳಬಹುದು ಎಂದು ಹೇಳಿದರು.
ಪಡಿತರ ಆಹಾರ ಪಡೆಯುವ ಸಂದರ್ಭದಲ್ಲಿ ಹೆಬ್ಬೆಟ್ ಗುರುತು ಬರದಿದ್ದರೆ ಮುಂಚಿತವಾಗಿ ನ್ಯಾಯಬೆಲೆ ಅಂಗಡಿಗೆ ಮನವಿಪತ್ರ ನೀಡಿದರೆ ಅಂತವರಿಗೆ ರಿಯಾಯಿತಿ ನೀಡಿ ಪಡಿತರ ಆಹಾರ ನೀಡಬೇಕು ಎಂದು ಸೂಚಿಸಿದರು.
ಅರ್ಹ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಅನ್ನ ಸವಿದಿ ಯೋಜನೆಯಾಡಿ ಒಂದು ಪಡಿತರ ಚೀಟಿಯಲ್ಲಿ ಒಬ್ಬ ಸದಸ್ಯರಿದ್ದು ಅವರು ಅಂಗವಿಕಲರಾಗಿದ್ದು ಅಥವಾ ವಯಸ್ಸಾಗಿದ್ದರೆ ಅವರ ಮನೆ ಬಾಗಿಲಿಗೆ ಪಡಿತರ ಆಹಾರವನ್ನು ಒದಗಿಸುವ ವ್ಯವಸ್ಥೆ ಇದೆ. ಇಂತಹವರು 12,000 ಇದ್ದು, ಈಗಾಗಲೇ 2000 ಜನರಿಗೆ ಈ ರೀತಿ ಮನೆ ಬಾಗುಲಿಗೆ ಪೂರೈಕೆ ಮಾಡಲಾಗುತ್ತಿದೆ ಎಂದರು.

ನ್ಯಾಯಬೆಲೆ ಅಂಗಡಿ ಮಾಲೀಕರು ರಾತ್ರಿ 8ಗಂಟೆಯವರೆಗೆ ವರೆಗೆ ಪಡಿತರ ಅಂಗಡಿಯನ್ನು ತೆರೆಯಬೇಕು ಮಹಿಳೆಯರು ಕೆಲಸಕ್ಕೆ ಹೋಗಿ ಬಂದು ನಂತರ ಪಡಿತರ ಆಹಾರ ಪಡೆಯಲು ಅನುಕೂಲವಾಗುತ್ತದೆ ಇದು ಜಿಲ್ಲೆಯ ಎಲ್ಲಾ ನ್ಯಾಯಬೆಲೆ ಅಂಗಡಿಗಳಿಗೆ ಅನ್ವಯವಾಗುವಂತೆ ಆದೇಶ ಮಾಡಲಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಕೆಲವರು ಸರ್ವರ್ ಸಮಸ್ಯೆ, ಹೆಬ್ಬೆರಳು ಬರದೇ ಇರುವುದು, ಸಮಯದ ಅಭಾವ ಇನ್ನೂ ಮುಂತಾದ ಸಮಸ್ಯೆಗಳನ್ನ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಉಪ ವಿಭಾಗಾಧಿಕಾರಿ ನಾಹಿದಾ ಜಮ್ ಜಮ್, ಆಹಾರ ಇಲಾಖೆಯ ಜಂಟಿ ನಿರ್ದೇಶಕರಾದ ಸೌಮ್ಯ, ತಹಸಿಲ್ದಾರ್ ಬಿ.ಆರತಿ, ಪಿಡಿಓ ಕವಿತಾ, ವಿ ಎಸ್ ಎಸ್ ಎನ್ ಅಧ್ಯಕ್ಷ ಗಂಗಾಧರ್, ಆಹಾರ ನಿರೀಕ್ಷಕರಾದ ವೀಣಾ, ಸಿದ್ದೇಗೌಡ , ಪಪಂ ಮಾಜಿ ಸದಸ್ಯ ಶಿವಕುಮಾರ್ ಹಾಗೂ ಇತರೆ ಅಧಿಕಾರಿಗಳು ಇದ್ದರು.






