ಗುಬ್ಬಿ: ರಾಜ್ಯೋತ್ಸವದಲ್ಲಿ ಮಾಜಿ ಸೈನಿಕರಿಗೆ ರಾಜ್ಯೋತ್ಸವ ಪ್ರಶಸ್ತಿ ಕೊಡದೆ ಕಡೆಗಣಿಸಿರುವುದು ಸರಿಯಲ್ಲ ಎಂದು ತಾಲೂಕು ಮಾಜಿ ಸೈನಿಕರ ಸಂಘದ ಅಧ್ಯಕ್ಷ ಬಿದರೆ ಲೋಕೇಶ್ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ತಾಲೂಕು ಕಚೇರಿ ಮುಂದೆ ತಾಲೂಕು ದಂಡಾಧಿಕಾರಿಗಳಿಗೆ ಮನವಿಪತ್ರ ಸಲ್ಲಿಸಿ ಮಾತನಾಡಿದ ಅವರು, ಕನ್ನಡ ರಾಜ್ಯೋತ್ಸವವು ಕರ್ನಾಟಕದ ಅಸ್ತಿತ್ವ, ಅಹಂ ಮತ್ತು ಕನ್ನಡಿಗರ ಒಗ್ಗಟ್ಟಿನ ಸಂಕೇತವಾಗಿದೆ. ಈ ದಿನದಂದು ಸರ್ಕಾರವು ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ತೊಡಗಿರುವ ವ್ಯಕ್ತಿಗಳಿಗೆ ರಾಜ್ಯೋತ್ಸವ ಪ್ರಶಸ್ತಿಗಳನ್ನು ನೀಡುವುದು ಹಿಂದಿನಿಂದಲೂ ನಡೆದುಕೊಂಡ ಬಂದಿದೆ.
ಆದರೆ ಈ ವರ್ಷ ಸರ್ಕಾರವು ಮಾಜಿ ಸೈನಿಕರಿಗೆ ಯಾವುದೇ ಪ್ರಶಸ್ತಿಯನ್ನು ನೀಡದೆ ನಿರಾಕರಿಸಿರುವುದು ಸೈನಿಕರಲ್ಲಿ ಬೇಸರ ಮತ್ತು ಆಕ್ರೋಶವನ್ನು ಉಂಟುಮಾಡಿದೆ.
ಸೈನಿಕರು ಮತ್ತು ದೇಶದ ರಕ್ಷಣೆ ಕೇವಲ ಕೇಂದ್ರ ಸರ್ಕಾರದ ಹೊಣೆಯಲ್ಲ, ದೇಶದ ಪ್ರತಿಯೊಂದು ರಾಜ್ಯದ ಕರ್ತವ್ಯವಾಗಿದೆ. ಕರ್ನಾಟಕ ರಾಜ್ಯದ ನೂರಾರು ಯುವಕರು ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಾ ಯುದ್ದ ಭೂಮಿಯಲ್ಲಿ ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ ಹಾಗೂ ಸಾವಿರಾರು ಯುವಕರು ಪ್ರಸ್ತುತ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಸೇವೆಯು ಕೇವಲ ರಾಷ್ಟ್ರಕ್ಕೆ ಮಾತ್ರವಲ್ಲದೆ ಕರ್ನಾಟಕ ರಾಜ್ಯಕ್ಕೂ ಸಹ ಗೌರವದ ವಿಷಯವಾಗಿದೆ ಎಂದರು.
ತಾಲೂಕು ಮಾಜಿ ಸೈನಿಕರ ಸಂಘದ ಗೌರವಾಧ್ಯಕ್ಷ ರಾಜಶೇಖರಯ್ಯ ಮಾತನಾಡಿ, ತಮ್ಮ ಜೀವವನ್ನೆ ಮುಡುಪಾಗಿಟ್ಟು ಭಾರತೀಯ ಸೇನೆಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದ ಸೈನಿಕರನ್ನು ರಾಜ್ಯದ ಅತ್ಯುನ್ನತ ಗೌರವವಾದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಪರಿಗಣಿಸದೆ ಇರುವುದು ತುಂಬಾ ನೋವಿನ ಸಂಗತಿಯಾಗಿದೆ. ರಾಜ್ಯೋತ್ಸವ ಪ್ರಶಸ್ತಿಗೆ ಪರಿಗಣಿಸುವಾಗ ಸೇವೆಗಿಂತ ರಾಜಕೀಯ ಪ್ರಭಾವ ಹೆಚ್ಚಿರುವುದು ಕಂಡುಬರುತ್ತದೆ. ರಾಜ್ಯೋತ್ಸವ ಪ್ರಶಸ್ತಿಯು ಕೇವಲ ಕಲಾ, ಸಾಹಿತ್ಯ, ಚಲನಚಿತ್ರ ಮತ್ತು ಕ್ರೀಡೆಗೆ ಸೀಮಿತವಾಗಿರದೆ ದೇಶಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದ ಸೈನಿಕರನ್ನು ಪರಿಗಣಿಸಬಹುದಾಗಿದೆ ಎಂದರು.
ಮಾಜಿ ಸೈನಿಕರ ಸಂಘದ ಕಾರ್ಯದರ್ಶಿ ವಿವೇಕಾನಂದ ಚಾರ್ ಮಾತನಾಡಿ, ಸರ್ಕಾರವು ಮುಂದಿನ ವರ್ಷಗಳಿಂದ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಮಾಜಿ ಸೈನಿಕರ ಸೇವೆಯನ್ನು ಸ್ಮರಿಸಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಪರಿಗಣಿಸುವಂತೆ ನೀತಿ ರೂಪಿಸಬೇಕಾಗಿದೆ. ಮಾಜಿ ಸೈನಿಕರಿಗೆ ಪ್ರಶಸ್ತಿ ನೀಡುವುದು ಕೇವಲ ಗೌರವವಲ್ಲ ಅದು ಕರ್ನಾಟಕದ ಯುವಕರಿಗೆ ಪ್ರೇರಣೆಯಾಗಿದೆ. ದೇಶಕ್ಕಾಗಿ ನಿಸ್ವಾರ್ಥ ಸೇವೆ ಮಾಡಿದವರನ್ನು ರಾಜ್ಯವು ಎಂದೂ ಮರೆಯುವುದಿಲ್ಲ ಎಂಬ ಸಂದೇಶವೂ ಇಂದಿನ ಯುವಕರಿಗೆ ಪ್ರೇರಣದಾಯಕವಾಗುತ್ತದೆ ಎಂದರು.
ತಹಸಿಲ್ದಾರ್ ಬಿ ಆರತಿ ಮನವಿ ಪತ್ರ ಸ್ವೀಕರಿಸಿ ಸಂಬಂಧಪಟ್ಟ ಮೇಲಾಧಿಕಾರಿಗಳ ಗಮನಕ್ಕೆ ತರುತ್ತೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳಾದ ಮೋಹನ್, ಜಗದೀಶ್, ಚಂದ್ರಶೇಖರಯ್ಯ, ಪಂಚಾಕ್ಷರಯ್ಯ, ವೀರನಾರಿಯರಾದ ಭವ್ಯ, ಶೈಲಾರೈ ಹಾಗೂ ತಾಲೂಕಿನ ಮಾಜಿ ಸೈನಿಕರಗಳು ಉಪಸ್ಥಿತರಿದ್ದರು.





