
ಗುಬ್ಬಿ : ತಾಲ್ಲೂಕು ಬಿದರೆ ಸರ್ಕಾರಿ ಆಸ್ಪತ್ರೆ, ಶಾಲೆ, ಅಂಗನವಾಡಿ ಸೇರಿದಂತೆ ವಿವಿಧ ಸ್ಥಳಗಳಿಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ದಿಢೀರ್ ಭೇಟಿ ನೀಡಿ ಮಕ್ಕಳೊಂದಿಗೆ ಸಂವಾದ ನಡೆಸಿದರು. ಜಿಲ್ಲಾಧಿಕಾರಿ ಭೇಟಿ ನೀಡಿದಾಗ ಬಿದರೆ ಆಸ್ಪತ್ರೆಗೆ ವೈದ್ಯರು ಬಂದಿರಲಿಲ್ಲ, ಅಂಗನವಾಡಿಯಲ್ಲಿ ಮಕ್ಕಳಿಗೆ ಹಾಲು ನೀಡಿರಲಿಲ್ಲ, ಶಿಕ್ಷಕರು ಮಕ್ಕಳಿಗೆ ಓದುವುದನ್ನೇ ಕಲಿಸದಿರುವುದನ್ನು ಕಂಡು ಜಿಲ್ಲಾಧಿಕಾರಿಗಳು ಅಧಿಕಾರಿಗಳನ್ನ ತರಾಟೆ ತೆಗೆದುಕೊಂಡರು.
ಸರ್ಕಾರಿ ಆಸ್ಪತ್ರೆಗೆ ಗ್ರಾಮಾಂತರ ಪ್ರದೇಶದ ಬಡಜನರೇ ಹೆಚ್ಚಾಗಿ ಬರುವುದರಿಂದ ವೈದ್ಯರು ಸಮಯಕ್ಕೆ ಸರಿಯಾಗಿ ಲಭ್ಯವಿರಬೇಕು. ಮನಸ್ಸಿಗೆ ತೋಚಿದಂತೆ ಬಂದರೆ ಹಳ್ಳಿಯ ಜನರ ಕಥೆ ಏನಾಗಬೇಕು? ರೋಗಿಗಳ ಚಿಕಿತ್ಸೆ ಸೇರಿದಂತೆ ಎಲ್ಲಾ ಕೆಲಸವನ್ನು ಆಸ್ಪತ್ರೆಯಲ್ಲಿರುವ ಶುಶ್ರೂಷಕಿ ಒಬ್ಬರೇ ಮಾಡುತ್ತಿದ್ದಾರಾ ಎಂದು ಕ್ಲಾಸ್ ತೆಗೆದುಕೊಂಡರು. ಆಸ್ಪತ್ರೆ ನೋಡಿದರೆ ಇಷ್ಟು ಚಿಕ್ಕದಾಗಿದ್ದು, ಇಲ್ಲಿ ಹೇಗೆ ಚಿಕಿತ್ಸೆ ನೀಡುತ್ತೀರಾ? ಆಸ್ಪತ್ರೆಯಲ್ಲಿ ಚಿಕಿತ್ಸೆ, ಔಷಧೋಪಚಾರ ನೀಡುವುದು ಸಮಾಧಾನ ತಂದಿದೆಯೇ ಎಂದು ಅಲ್ಲಿಗೆ ಬಂದಿದ್ದಂತಹ ರೋಗಿಗಳನ್ನೇ ಪ್ರಶ್ನಿಸಿದರು.

ಅಂಗನವಾಡಿಗೆ ತೆರಳಿದ ಸಮಯದಲ್ಲಿ ಮಕ್ಕಳಿಗೆ ಹಾಲು ನೀಡಿಲ್ಲ, ಸಹಾಯಕಿ ಕೂಡ ಬಂದಿಲ್ಲ ಹಾಜರಾತಿ ವಹಿಯಲ್ಲಿರುವ ಹಾಗೂ ಹಾಜರಾತಿ ಮಕ್ಕಳ ಸಂಖ್ಯೆಯು ಒಂದಕ್ಕೊಂದು ತಾಳೆ ಆಗುತ್ತಿಲ್ಲ ಪ್ರತಿನಿತ್ಯವೂ ಇದೇ ರೀತಿ ನಡೆಯುತ್ತಿದೆ ಎಂದು ಪ್ರಶ್ನಿಸಿದ್ದರು.
ಬಿದರೆ ಸರಕಾರಿ ಶಾಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಶಿಕ್ಷಕರನ್ನ ತೀವ್ರ ತರಾಟೆಗೆ ತೆಗೆದುಕೊಂಡ ಜಿಲ್ಲಾಧಿಕಾರಿಗಳು, ಖುದ್ದು ಅವರೇ ಬಳಪ ಹಿಡಿದು ಇಂಗ್ಲಿಷ್ ಹಾಗೂ ಗಣಿತದ ಪಾಠ ಮಾಡಿ ವಿದ್ಯಾರ್ಥಿಗಳಿಗೆ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದರು. ವಿದ್ಯಾರ್ಥಿಗಳಿಗೆ ಪುಸ್ತಕ ನೀಡಿ ಓದಿಸಿದರು. ಬರೆಸಿದರು. ಪರೀಕ್ಷಾ ಸಿದ್ಧತೆಗಳ ಬಗ್ಗೆ ಮಾಹಿತಿ ನೀಡಿದರು.

ನಿಮಗೆ ಸರ್ಕಾರದಿಂದ ಪ್ರತಿ ತಿಂಗಳು ಸಂಬಳ ಬರುತ್ತಿದೆ ನೀವು ಉಚಿತವಾಗಿ ಸೇವೆ ಮಾಡುತ್ತಿಲ್ಲ ಆತ್ಮಸಾಕ್ಷಿಯಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದರು.
ಇದೇ ಸಂದರ್ಭದಲ್ಲಿ ತಹಸಿಲ್ದಾರ್ ಬಿ.ಆರತಿ, ತಾಪಂ ಇಒ ರಂಗನಾಥ್, ನಾಡಕಚೇರಿಯ ಉಪ ತಹಸೀಲ್ದಾರ್ ನಾಗಭೂಷಣ್, ಡಾ.ಬಿಂದು ಮಾಧವ, ಪಿಡಿಒ ಹಾಗೂ ಇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು






