ಗುಬ್ಬಿ :  ಹದಿಹರೆಯದ ವಯಸ್ಸಿನಲ್ಲಿ ಮನಸ್ಸು ಸಂಚಲವಾಗಿರುವುದರಿಂದ ವಿದ್ಯಾರ್ಥಿಗಳು ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೊಂಡಾಗ ಮಾತ್ರ ಉನ್ನತ ಮಟ್ಟದ ಗುರಿಯನ್ನು ಸಾಧಿಸಲು ಸಾಧ್ಯವಾಗುತ್ತದೆ ಎಂದು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಅನುಪಮ ಡಿ ತಿಳಿಸಿದರು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ತಾಲೂಕು ಕಚೇರಿ, ಪಟ್ಟಣ ಪಂಚಾಯಿತಿ, ತಾಲೂಕು ವಕೀಲರ ಸಂಘ, ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ಅಭಿಯೋಜಕರ ಇಲಾಖೆ ವತಿಯಿಂದ ಏರ್ಪಡಿಸಿದ್ದ ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ವೃತ್ತಿ ಮಾರ್ಗದರ್ಶನ ತರಬೇತಿ ಕಾರ್ಯಗಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪಿಯುಸಿ ಹಂತದಲ್ಲಿ ವಿದ್ಯಾರ್ಥಿಗಳು ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೊಂಡು ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ನಿರಂತರ ಅಭ್ಯಾಸದಲ್ಲಿ ತೊಡಗಿದಾಗ ಸಮಾಜದಲ್ಲಿ ಜವಾಬ್ದಾರಿಯುತ ವ್ಯಕ್ತಿಯಾಗಬಹುದು. ಹೆಣ್ಣು ಮಕ್ಕಳು ತಾಳ್ಮೆಯಿಂದ ಹಿರಿಯರ ಮಾರ್ಗದರ್ಶನ ಪಡೆದು ವಿದ್ಯಾಭ್ಯಾಸ ಮಾಡಿ ಗುರಿ ಸಾಧನೆಯತ್ತ ಹೆಜ್ಜೆ ಇಡಬೇಕು.

ಸಾವಿತ್ರಿಬಾಯಿ ಫುಲೆ ಹೋರಾಟದಿಂದ ಹಾಗೂ ಅಂಬೇಡ್ಕರ್ ರಚಿಸಿರು  ಸಂವಿಧಾನದಿಂದ ಇಂದು ಹೆಣ್ಣು ಮಕ್ಕಳು ಎಲ್ಲಾ ರಂಗದಲ್ಲೂ ಮುಂದೆ ಬಂದು ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಸಾಧ್ಯವಾಗಿದೆ. ಹೆಣ್ಣು ಕಲಿತರೆ ದೇಶ ಕಲಿತಂತೆ ಎಂಬಂತೆ ಪ್ರಕೃತಿಯಲ್ಲಿ ಸಹಜವಾಗಿ ಹೆಣ್ಣು ಬದುಕಲು ಎಲ್ಲಾ ರೀತಿಯ ಹಕ್ಕುಗಳನ್ನು ಸಂವಿಧಾನ ‌ನೀಡಿದೆ.  ಹತ್ತುಹಲವು ಸಮಸ್ಯೆಗಳ ನಡುವೆಯೂ ಈಜುವುದನ್ನು ಕಲಿತರೆ ಜೀವನ ಉತ್ತಮವಾಗಿರುತ್ತದೆ.  ಹಾಲಿನ ಒಳಗೆ ತುಪ್ಪ ಇರುವಂತೆ ವಿದ್ಯಾರ್ಥಿಗಳು ಸಾಗಬೇಕಾಗಿದೆ. ಬೆರಳಿನ ತುದಿಯಲ್ಲಿ ಹಿಡಿ ಪ್ರಪಂಚದ ಜ್ಞಾನವನ್ನು ಮೊಬೈಲ್ ಮೂಲಕ ಪಡೆದುಕೊಳ್ಳಬಹುದು. ಮೊಬೈಲನ್ನು ಉತ್ತಮ ಕೆಲಸ ಕಾರ್ಯಗಳಿಗೆ ಬಳಸಿಕೊಂಡು ಉತ್ತಮವಾದುದನ್ನ ಅನುಕರಣೆ ಮಾಡಬೇಕು. ಅದರ ಬದಲು ರೀಲ್ಸ್, ಫೇಸ್‍ಬುಕ್ ನೋಡುವುದರಿಂದ ಯಾವುದೇ ಜೀವನವನ್ನು ಕಟ್ಟಿಕೊಳ್ಳಲು ಸಾಧ್ಯವಿಲ್ಲ. ನಮ್ಮನ್ನು ಮೊಬೈಲ್ ಕಂಟ್ರೋಲ್ ಮಾಡುವ ಬದಲು ನಾವು ನಮ್ಮ ಮನಸ್ಸನ್ನು ಕಂಟ್ರೋಲ್ ಮಾಡುವಂತರಾಗಬೇಕು.  ಪ್ರೀತಿ ,ಪ್ರೇಮ, ಆಕರ್ಷಣೆ, ಆಸೆಗಳಿಗೆ ಯುವಕರು ಬಲಿಯಾಗದೆ  ಉತ್ತಮ ದಾರಿಯಲ್ಲಿ ಸಾಗಬೇಕು. ತಂದೆ ತಾಯಿಗಳಿಗೆ ಗೌರವ ನೀಡಿ  ನಾಲ್ಕಾರು ಜನರು ಮೆಚ್ಚುವಂತಹ ಕೆಲಸ ಕಾರ್ಯಗಳನ್ನು ಮಾಡಬೇಕು ಎಂದು ತಿಳಿಸಿದರು.

ತಹಸೀಲ್ದಾರ್ ಆರತಿ ಬಿ ಮಾತನಾಡಿ, ಭಾರತದಲ್ಲಿ ವಯಸ್ಕ ಮಾನವ ಸಂಪನ್ಮೂಲ ಹೆಚ್ಚು ಇರುವುದರಿಂದ ಈ ಸಂಪನ್ಮೂಲ ಸರಿಯಾಗಿ ಸದ್ಬಳಕೆಯಗಬೇಕು ಎಂಬ ನಿಟ್ಟಿನಲ್ಲಿ ಸರ್ಕಾರವು ಹಲವಾರು ತರಬೇತಿ ಕೌಶಲ್ಯಗಳನ್ನು ನೀಡುತ್ತಿದೆ.  ವಿದ್ಯಾರ್ಥಿಗಳು ಒಂದು ಗುರಿಯನ್ನು ಇಟ್ಟುಕೊಂಡು ಸಾಗಬೇಕಾಗುತ್ತದೆ. ಮನುಷ್ಯರಿಗಿಂತ ಮನುಷ್ಯರು ಭಿನ್ನವಾಗಿರುವುದರಿಂದ ಪ್ರತಿಯೊಬ್ಬರ ಪ್ರತಿಭೆಯು ವಿಭಿನ್ನವಾಗಿದೆ. ಆದ್ದರಿಂದ ತನಗೆ ಇಷ್ಟವಾದುದನ್ನು ಅಧ್ಯಯನ ಮಾಡಿ ಅದರಲ್ಲಿ  ವೃತ್ತಿ ಪ್ರಾವಿಣ್ಯತೆ ಪಡೆಯಬೇಕು. ಮನೆ ,ದೇಶ, ಸಮಾಜಕ್ಕೆ ಹೊರೆಯಾಗದ ರೀತಿಯಲ್ಲಿ ಉತ್ತಮ ಕೆಲಸ ಮಾಡಿ  ಸತ್ಪ್ರಜೆಯಾಗಿಬೇಕು ಎಂದು ತಿಳಿಸಿದರು. 

ಸಂಪನ್ಮೂಲ ವ್ಯಕ್ತಿಯಾಗಿ ಮಿಡಿಯಾ ಬ್ಯಾಕ್ ಆಫೀಸ್ ಸಂಸ್ಥಾಪಕ ಎಸ್ ರಘು ಮಾತನಾಡಿ, ಹಿಂದಿನ ಕಾಲದಲ್ಲಿ ವಿದ್ಯಾಭ್ಯಾಸ ಮಾಡುವವರ ಸಂಖ್ಯೆ ಕಡಿಮೆ ಇತ್ತು. ಆದರೆ ಆಧುನಿಕ ತಂತ್ರಜ್ಞಾನ ಬೆಳೆದಂತೆ ವಿದ್ಯಾಭ್ಯಾಸ ಮಾಡುವವರ ಸಂಖ್ಯೆ ಹೆಚ್ಚಿರುವುದರಿಂದ ಎಲ್ಲ ರಂಗದಲ್ಲೂ  ಸ್ಪರ್ಧೆ ಇರುವುದರಿಂದ ಪ್ರತಿಯೊಬ್ಬರು ಸ್ಪರ್ಧೆಗೆ ಅನುಗುಣವಾಗಿ ವಿದ್ಯಾಭ್ಯಾಸ ಕಲಿಯಬೇಕು ಎಂದರು.

ಕೆರಿಯರ್ ಸಂಸ್ಥೆಯ ಹರೀಶ್ ವಿದ್ಯಾರ್ಥಿಗಳಿಗೆ ಮುಂದಿನ ಭವಿಷ್ಯದ ಬಗ್ಗೆ ಹಾಗೂ ಪರೀಕ್ಷೆಯನ್ನು ಯಾವ ರೀತಿ ಹೆದರಿಸಬೇಕು ಎಂಬ ವಿಷಯ ಬಗ್ಗೆ ಮಾಹಿತಿ ನೀಡಿದರು.

ವಕೀಲರ ಸಂಘದ ಅಧ್ಯಕ್ಷ ಎಂಪಿ ಮೋಹನ್ ಮಾತನಾಡಿ, ವ್ಯಕ್ತಿಗಳು ಗುರಿ ಸಾಧನೆ ಮಾಡಲು ಸರ್ಕಾರ ಹಲವಾರು ಸೌಲಭ್ಯಗಳನ್ನು ನೀಡುತ್ತಿದೆ ಅವುಗಳನ್ನು ಸಮರ್ಪಕವಾಗಿ ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಗಾರದಲ್ಲಿ ಸರ್ಕಾರಿ ವಕೀಲರಾದ ಅಕ್ಷತಾ ವಿಶ್ವನಾಥ್, ಹಿಂದುಳಿದ ವರ್ಗಗಳ ಕಲ್ಯಾಣ್ಯಾಧಿಕಾರಿ ಹೆಚ್.ಎಸ್.ಪವಿತ್ರ, ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಮಂಜುಳಾದೇವಿ, ಆನಂದ್ ರಾಜ್, ತಾಲೂಕಿನ ಹಿಂದುಳಿದ ವರ್ಗಗಳ ಹಾಸ್ಟೆಲ್ ನಿಲಯ ಪಾಲಕರು, ವಿದ್ಯಾರ್ಥಿಗಳು,ಸಿಬ್ಬಂದಿ ವರ್ಗದವರು ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here