ಗುಬ್ಬಿ : ಪ್ರವಚನಗಳು ಮನುಷ್ಯರನ್ನು ಸನ್ಮಾರ್ಗದಲ್ಲಿ ನಡೆಸುವಂಥ ಶಕ್ತಿ ಹೊಂದಿದ್ದೆವೆ ಎಂದು ಚಿಕ್ಕ ತೊಟ್ಲು ಕೆರೆ ಮಠಾಧ್ಯಕ್ಷರಾದ ಅಟವಿ ಶಿವಲಿಂಗ ಮಹಾಸ್ವಾಮಿಗಳು ತಿಳಿಸಿದರು.
ಪಟ್ಟಣದ ತೊರೆಮಠದದಲ್ಲಿ ಅಟವೀ ಸ್ವಾಮಿಗಳ 125ನೇ ಪುಣ್ಯಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಅಟವಿ ಸ್ವಾಮಿಗಳು ತುಂಬಾ ಜ್ಞಾನವಂತರು, ಮಹಾನ್ ಪುರುಷರು ಅವರು ನಮ್ಮಗೆ ಇಂದು ದಾರಿ ದೀಪವಾಗಿದ್ದಾರೆ.
ಅಟವಿ ಸ್ವಾಮಿಗಳ ಪುಣ್ಯ ಸ್ಮರಣೆಯನ್ನು 2000 ನೇ ಇಸವಿಯಲ್ಲಿ ಮಾಜಿ ಮುಖ್ಯಮಂತ್ರಿ ಎಸ್ .ಎಂ ಕೃಷ್ಣ ಅವರನ್ನು ಆಹ್ವಾನಿಸಿ ಅವರ ಸಮ್ಮುಖದಲ್ಲಿ 101 ಸ್ವಾಮೀಜಿಗಳ ಪಾದಪೂಜೆ ಮಾಡುವ ಮೂಲಕ ಜಯಂತಿಯನ್ನು ಆಚರಿಸಲಾಗಿತ್ತು. ನಂತರ ದಿನಗಳಲ್ಲಿ ಚಿಕ್ಕ ತೊಟ್ಲುಕೆರೆ, ಸಿದ್ದಗಂಗಾ ಮಠ, ಯಡಿಯೂರು, ಗುಬ್ಬಿಯಲ್ಲಿ ಇನ್ನೂ ಮುಂತಾದ ಕಡೆ ಆಚರಣೆ ಮಾಡುತ್ತಿದ್ದಾರೆ ಎಂದರು.
ತೊರೆಮಠದ ಮಠಾಧ್ಯಕ್ಷರಾದ ಶ್ರೀ ಅಟವಿ ಚನ್ನಬಸವಸ್ವಾಮಿಜಿಗಳು ಮಾತನಾಡಿ, ಅಟವಿ ಶಿವಲಿಂಗಸ್ವಾಮಿಗಳ ಸಂಕಲ್ಪದಂತೆ ಇಂದು ತೊರೆಮಠದಲ್ಲಿ ಅಟವಿ ಸ್ವಾಮಿಗಳ 125 ವರ್ಷದ ಪುಣ್ಯ ಸ್ಮರಣೆಯನ್ನು ಮಾಡಲಾಗಿದೆ. ಪುಣ್ಯ ಸ್ಮರಣೆ ಅಂಗವಾಗಿ ಬೆಳಿಗ್ಗೆಯಿಂದ ಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಗಳಾದ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ ಇನ್ನು ಮುಂತಾದ ಧಾರ್ಮಿಕ ಕಾರ್ಯಗಳನ್ನು 18 ಕೋಮುಗಳ ಮುಖಂಡರ ಸಮ್ಮುಖದಲ್ಲಿ ನಡೆಸಲಾಯಿತು. ಈ ಪುಣ್ಯ ಸ್ಮರಣೆಯನ್ನು ಮುಂದಿನ ವರ್ಷ ಇನ್ನೂ ಹೆಚ್ಚಿನ ರೀತಿಯಲ್ಲಿ ಅದ್ದೂರಿಯಾಗಿ ಉತ್ಸವವನ್ನು ಮಾಡಲಾಗುತ್ತದೆ ಎಂದು ತಿಳಿಸಿದರು.
ತೋಟ್ಲುಕೆರೆ ಮಠದ ಅಟವಿ ಮಲ್ಲಿಕಾರ್ಜುನಸ್ವಾಮಿ ಮಾತನಾಡಿ, ಧಾರ್ಮಿಕ ಪರಂಪರೆಯಲ್ಲಿ ಜಯಂತಿಗಳು ಹಾಗೂ ಪುಣ್ಯ ಸ್ಮರಣೆಗಳನ್ನು ನಡೆಸಿಕೊಂಡು ಬರುವುದು ರೂಢಿಯಲ್ಲಿದೆ.
ಮೇಣದಬತ್ತಿಯಂತೆ ಉರಿದು ಬೇರೆಯವರಿಗೆ ಆಶ್ರಯವಾಗಿರುವ ಸಾಧಕರನ್ನು ಇಂದು ನಾವು ಜಯಂತಿ ರೂಪದಲ್ಲಿ ಆಚರಿಸುತ್ತ ಬರುತ್ತಿದ್ದೇವೆ. ಮನುಷ್ಯ ಹುಟ್ಟಿದ ಮೇಲೆ ಒಂದಲ್ಲ ಒಂದು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪುಣ್ಯಾತ್ಮರ ನಾಮಸ್ಮರಣೆ ಮಾಡುವುದರಿಂದ ನಮಗೆ ಶ್ರೇಯಸ್ಸು ಹೆಚ್ಚಾಗುತ್ತದೆ ಎಂದರು.
ಅಟವೀ ಸ್ವಾಮಿಗಳ 125ನೇ ಪುಣ್ಯಸ್ಮರಣೋತ್ಸವ ಕಾರ್ಯಕ್ರಮವನ್ನು ವಿವಿಧ ಧಾರ್ಮಿಕ ಕಾರ್ಯಗಳೊಂದಿಗೆ ಅಟವೀ ಸ್ವಾಮಿಯವರ ಭಾವಚಿತ್ರವನ್ನು ಹೂವಿನ ಅಲಂಕೃತವಾದ ರಥಕ್ಕೆ ಪ್ರತಿಷ್ಠಾಪಿಸಿ ಊರಿನ ಪ್ರಮುಖ ಬೀದಿಗಳಲ್ಲಿ ವಿವಿಧ ಜಾನಪದ ಕಲಾತಂಡಗಳೊಂದಿಗೆ ಮೆರವಣಿಗೆ ಮಾಡಲಾಯಿತು.
ಈ ಸಂದರ್ಭದಲ್ಲಿ ಪಟ್ಟಣದ18 ಕೋಮುವಿನ ಮುಖಂಡರುಗಳು ಉಪಸ್ಥಿತರಿದ್ದರು.





