ಗುಬ್ಬಿ : ತಾಜಾ ತರಕಾರಿಗಳನ್ನು ಸೇವಿಸುವುದರಿಂದ ಉತ್ತಮ ಪೌಷ್ಟಿಕಾಂಶಗಳು ಲಭಿಸುತ್ತವೆ ಎಂದು ಶಾಸಕ ಶ್ರೀನಿವಾಸ್ ತಿಳಿಸಿದರು.
ತಾಲೂಕಿನ ಚೇಳೂರಿನ ಶ್ರೀ ಮರುಳಬಸವೇಶ್ವರ ಸಮುದಾಯ ಭವನದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಏರ್ಪಡಿಸಿದ್ದ ಪೋಷಣ್ ಅಭಿಯಾನ ಮಾಸಾಚರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಸಾವಯುವ ಗೊಬ್ಬರದಲ್ಲಿ ಬೆಳೆಯುವ ವರ ಸಂಖ್ಯೆ ಕಡಿಮೆ ಇರುವುದರಿಂದ ನಾವುಗಳು ವಿಷಪೂರಿತ ಆಹಾರವನ್ನು ಪ್ರತಿನಿತ್ಯ ಸೆವಿಸುತ್ತದ್ದೇವೆ. ಈ ಆಹಾರಗಳಿಂದ ಯಾವುದೇ ಗುಣಮಟ್ಟವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಹಾಗಾಗಿ ಸಾಕಷ್ಟು ಮಕ್ಕಳಿಂದ ಹಿಡಿದು ವೃದ್ಧರವರೆಗೆ ಒಂದಲ್ಲ ಒಂದು ಸಮಸ್ಯೆಗಳು ಕಾಡುತ್ತಲೇ ಇವೆ ಸರಕಾರ ಹಲವು ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜಾಗೃತಿ ಮೂಡಿಸುತ್ತಿದ್ದರು ಸಹ ಪೌಷ್ಟಿಕತೆಯ ಪ್ರಮಾಣ ಮಾತ್ರ ಕಡಿಮೆ ಆಗದೆ ಇರುವುದು ಬೇಸರ ತರುತ್ತಿದೆ ಎಂದು ಅವರು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಡಿ ಡಿ ಸಿದ್ದರಾಮಣ್ಣ ಮಾತನಾಡಿ, ಪ್ರತಿ ವರ್ಷವೂ ಸಹ ಇಂತಹ ಪೋಷಣ್ ಅಭಿಯಾನ ಕಾರ್ಯಕ್ರಮವನ್ನು ಅಂಗನವಾಡಿ ಕೇಂದ್ರಗಳಲ್ಲಿ ಮಾಡುವ ಮೂಲಕ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದ್ದೇವೆ. ಆಹಾರದ ಪದ್ಧತಿಯಲ್ಲಿ ಸಾಕಷ್ಟು ಬದಲಾವಣೆಯನ್ನು ಕಾಣುತ್ತಿದ್ದು ಜಂಕ್ ಫುಡ್ ಗಳಿಗೆ ಮಾರುಹೋಗಿರುವ ನಾವುಗಳು ಪೌಷ್ಟಿಕ ಅಂಶದ ಆಹಾರದ ಬಗ್ಗೆ ತಿಳಿದುಕೊಳ್ಳದೆ ಸಾಕಷ್ಟು ಅನಾರೋಗ್ಯದಿಂದ ಬಳಲುವಂತಾಗಿದೆ ಸ್ಥಳೀಯವಾಗಿ ಸಿಗುವಂತಹ ಗುಣಮಟ್ಟದ ಆಹಾರವನ್ನು ನಾವೆಲ್ಲರೂ ಕೂಡ ಪಡೆದುಕೊಳ್ಳಬೇಕಾಗಿದ್ದು ಸಾರ್ವಜನಿಕರು ಇದರ ಬಗ್ಗೆ ಹೆಚ್ಚಿನ ಜಾಗೃತಿ ವಹಿಸಬೇಕಾಗಿದೆ ಎಂದರು.
ತಾಲೂಕು ಆರೋಗ್ಯ ಅಧಿಕಾರಿ ಡಾ. ಬಿಂದು ಮಾಧವ ಮಾತನಾಡಿ, ಚಿಕ್ಕ ಮಕ್ಕಳನಿಂದ ಹಿಡಿದು ದೊಡ್ಡವರವರೆಗೂ ಸಹ ಒಂದಲ್ಲ ಒಂದು ಅನಾರೋಗ್ಯ ಕಾಡುತ್ತಿದ್ದು ಆರೋಗ್ಯವೇ ಭಾಗ್ಯ ಎಂಬುದನ್ನೇ ನಾವು ಮರೆಯುವಂತಾಗಿದೆ ಪ್ರತಿಯೊಬ್ಬರಿಗೂ ಉತ್ತಮ ಗುಣಮಟ್ಟದ ಆಹಾರ ಸಿಗಬೇಕು ಮತ್ತು ಪೌಷ್ಟಿಕಾಂಶ ಭರಿತ ಆಹಾರ ಸೇವನೆಯನ್ನು ಮಾಡುವಂತಹ ಜಾಗೃತಿಯನ್ನು ಮೂಡಿಸಲೇಬೇಕಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಗರ್ಭಿಣಿಯರಿಗೆ ಸೀಮಂತ, ಪುಟ್ಟ ಮಕ್ಕಳಿಗೆ ಅನ್ನ ಪ್ರಾಶನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಸಿ ಡಿ ಪಿ ಓ ಕೃಷ್ಣಮೂರ್ತಿ, ಗ್ರಾಮ ಪಂಚಾಯತಿ ಅಧ್ಯಕ್ಷೆ ಜಯಮ್ಮ, ಜಿಲ್ಲಾ ನಿರೂಪಣಾಧಿಕಾರಿ ಅಂಬಿಕಾ, ವೃತ್ತದ ಮೇಲ್ವಿಚಾರಕಿ ನೇತ್ರಾವತಿ ಮುಖಂಡರಾದ ಚೇಳೂರು ಶಿವಾನಂಜಯ್ಯ, ಅಂಗನವಾಡಿ ಕಾರ್ಯಕರ್ತೆಯರು, ಮಕ್ಕಳು, ಪೋಷಕರು ಇತರರು ಇದ್ದರು.





