ಗುಬ್ಬಿ : ಇತ್ತೀಚಿನ ದಿನಗಳಲ್ಲಿ ರೈತರು ವಿಪರೀತ ರಾಸಾಯನಿಕ ಗೊಬ್ಬರ, ಕಳೆನಾಶಕ, ಕೀಟನಾಶಕ ಬಳಕೆ ಮಾಡಿ ಮಣ್ಣಿನ ಆರೋಗ್ಯ ಕ್ಷೀಣಿಸುತ್ತಿದೆ ಎಂದು ಕೃಷಿ ಸಂಪನ್ಮೂಲ ವ್ಯಕ್ತಿ ರಾಜಶೇಖರ್ ತಿಳಿಸಿದರು.
ಪಟ್ಟಣದ ಕೃಷಿ ಇಲಾಖೆ ಕಚೇರಿ ಆವರಣದಲ್ಲಿ ಆತ್ಮ ಯೋಜನೆಯಡಿ ಕಿಸಾನ್ ಘೋಷ್ಠಿ ಮತ್ತು ವಿಶ್ವ ಮಣ್ಣು ಆರೋಗ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಸಾವಯವ ಮತ್ತು ನೈಸರ್ಗಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡು ರೈತರು ಮಣ್ಣು ಆರೋಗ್ಯ ಕಾಪಾಡಿಕೊಳ್ಳಬೇಕು. ಮಣ್ಣಿನ ಫಲವತ್ತತೆ ಮತ್ತು ಆರೋಗ್ಯ ಕಾಪಾಡಲು ರೈತರು ಜೀವಾಮೃತ , ಎರೆಹುಳು ಗೊಬ್ಬರ, ಸಾವಯವ ಗೊಬ್ಬರವನ್ನು ಬಳಕೆ ಮಾಡಬೇಕು ಎಂದರು.
ಕೆವಿಕೆ ವಿಜ್ಞಾನಿ ಡಾ.ಕೀರ್ತಿಶಂಕರ್ ಮಾತನಾಡಿ, ರೈತರು ಜೈವಿಕ ಗೊಬ್ಬರವಾದ ಟ್ರೈಕೊಡರ್ಮ, ಸುಡೋ ಮೊನಸ್, ರೈಜೋಬಿಯಮ್ ಬಳಸುವುದರಿಂದ ಅಡಿಕೆ ಮತ್ತು ತೆಂಗಿನ ಬೆಳೆಗೆ ಬರುವ ರಸಸೋರ ರೋಗ ಮತ್ತು ಕೊಳೆ ರೋಗ ನಿಯಂತ್ರಣ ಮಾಡಬಹುದು. ತೆಂಗು ಬೆಳೆಯಲ್ಲಿ ರೈನೋಸರಸ್ ಹುಳು ಮತ್ತು ಕೆಂಪು ಮೂತಿ ಹುಳ ಹತೋಟಿಗೆ ಬಕೆಟ್ ಟ್ರಾಪ್ ಬಳಕೆ ಮಾಡುವ ಬಗ್ಗೆ ಮಾಹಿತಿ ನೀಡಿದರು.
ಪ್ರಗತಿಪರ ಸಾವಯವ ಕೃಷಿಕರು ಅಳ್ಳೇನಹಳ್ಳಿ ಶಿವಲಿಂಗಯ್ಯ, ಸಹಾಯಕ ಕೃಷಿ ನಿರ್ದೇಶಕ ದಿವಾಕರ್, ಪ್ರಕಾಶ್. ಆತ್ಮ ಸಿಬ್ಬಂದಿ, ಕೃಷಿ ಸಖಿಯರು, ರೈತ ಭಾಂದವರು ಹಾಜರಿದ್ದರು.






