ತುಮಕೂರು : ಇತ್ತೀಚೆಗೆ ವಕೀಲರೊಬ್ಬರು ದೇಶದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತದಾದ್ಯಂತ ಸಾರ್ವಜನಿಕವಾಗಿ ಗಂಭೀರ ಚರ್ಚೆಗಳು ನಡೆಯುತ್ತಿವೆ ಜೊತೆಗೆ ಸಾರ್ವಜನಿಕ ಅವಮಾನ ಮತ್ತು ಭದ್ರತಾ ಉಲ್ಲಂಘನೆ ಆಗಿರುವುದು ಸಹ ಕಂಡು ಬಂದಿದೆ ಎಂದು ತುಮಕೂರು ಜಿಲ್ಲಾ ಛಲವಾದಿ ಮಹಾಸಭಾ ರಿ., ವತಿಯಿಂದ ಆಕ್ರೋಶವನ್ನು ಹೊರ ಹಾಕಲಾಗಿದೆ.

ನಮ್ಮ ದೇಶದ ಸರ್ವೋಚ್ಛ ನ್ಯಾಯಾಲಯದಲ್ಲಿ ವಿಕೃತ ಘಟನೆಯೊಂದು ಜರುಗಿದೆ. ಮುಖ್ಯ ನ್ಯಾಯಮೂರ್ತಿಗಳಾದ ಶ್ರೀಮಾನ್ ಬಿ.ಆರ್.ಗವಾಯಿ ಅವರಿಗೆ ರಾಕೇಶ್ ಕಿಶೋರ್ ಎಂಬ ಮತಾಂಧ ವಕೀಲನೊಬ್ಬ ತನ್ನ ಕಾಲಿನಿಂದ ಶೂ ಕಳಚಿ ನ್ಯಾಯಮೂರ್ತಿಗಳತ್ತ ತೂರಲು ಹವಣಿಸಿದ್ದಾನೆ. ಕಳೆದ ಒಂದು ತಿಂಗಳಿನಿಂದ ಬಿ.ಆರ್.ಗವಾಯಿಯವರ ಸುತ್ತ ನಡೆದ ಕೆಲವು ಸಂಗತಿಗಳನ್ನು ಗಮನಿಸಿದರೆ ಇದೊಂದು ಸಂಘಟಿತ ಹಿಂಸೆಯ ಅನುಷ್ಠಾನ ಎಂಬುದು ಮನದಟ್ಟಾಗುತ್ತದೆ. ಮಹಾರಾಷ್ಟçಕ್ಕೆ ಗವಾಯಿಯವರು ಭೇಟಿ ಕೊಟ್ಟಾಗ ಅಲ್ಲಿ ಅವರಿಗೆ ಸಲ್ಲಬೇಕಾದ ಗೌರವ ಸಂದಿರಲಿಲ್ಲ. ಶಿಷ್ಟಾಚಾರ ಉಲ್ಲಂಘನೆಯಾಗಿದ್ದರಿಂದ ಸ್ವತಃ ಅವರೆ ಬೇಸರ ತಳೆದಿದ್ದರು. ನ್ಯಾಯಮೂರ್ತಿಗಳ ತಾಯಿ ಕಮಲಾತಾಯಿಯವರಿಗೆ ಸಂಘಟನೆಯೊಂದರ ಕಾರ್ಯಕ್ರಮಕ್ಕೆ ಆಹ್ವಾನ ಬಂದದ್ದು, ಕಮಲಾತಾಯಿಯವರು ಅದನ್ನು ನಿರಾಕರಿಸಿದ್ದು ಚರ್ಚೆಯಾಗಿತ್ತು. ಖುಜುರಾಹೋ ದೇವಾಲಯದ ಮೂರ್ತಿಗೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಬಗ್ಗೆ ನ್ಯಾಯಮೂರ್ತಿಗಳು ಮಾಡಿದ ವಿಶ್ಲೇಷಣೆ ಮತೀಯವಾದಿ ಸಂಘಟನೆಗಳಿಗೆ ಅಪಥ್ಯವಾಗಿತ್ತು. ನೆನ್ನೆ ಶೂ ಎಸೆದ ಕಿಶೋರ್ ಎಂಬ ವಕೀಲ `ಸನಾತನ ಸಂಸ್ಥೆಗೆ ಅವಮಾನ ಎಸಗುವುದನ್ನು ಸಹಿಸುವುದಿಲ್ಲ’ ಎಂದು ಕೂಗಾಡಿರುವುದು ವರದಿಯಾಗಿದೆ ಎಂದು ಜಿಲ್ಲಾಧ್ಯಕ್ಷರಾದ ಭಾನುಪ್ರಕಾಶ್‌ರವರು ತಿಳಿಸಿದ್ದಾರೆ.

ನ್ಯಾ. ಗವಾಯಿಯವರು ದಲಿತ ಹಿನ್ನೆಲೆಯಿಂದ ಬಂದು ನಮ್ಮ ದೇಶದ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳ ಅತ್ಯುನ್ನತ ಸ್ಥಾನವನ್ನು ಅಲಂಕರಿಸಿದ ಎರಡನೆ ದಲಿತರು ಮತ್ತು ಮೊದಲನೆ ಬೌದ್ಧರು. ಇವರ ತಂದೆ ಆರ್. ಎಸ್. ಗವಾಯಿಯವರು ಅಂಬೇಡ್ಕರ್ ಅವರ ಜೊತೆ ಬೌದ್ಧ ಧರ್ಮವನ್ನು ಸ್ವೀಕರಿಸಿದ್ದರು ಎನ್ನುವುದು ಇಲ್ಲಿ ಉಲ್ಲೇಖಾರ್ಹ. ಪುಷ್ಯಮಿತ್ರ ಶುಂಗ ಬೌದ್ಧರ ತಲೆಕಡಿದವರಿಗೆ ಇನಾಮು ಕೊಡುತ್ತಿದ್ದನೆಂದು ಚರಿತ್ರೆ ಹೇಳುತ್ತದೆ. ಇಷ್ಟು ಸಂಕ್ಷಿಪ್ತ ಇತಿವೃತ್ತವನ್ನು ಗಮನಿಸಿದರೆ ನಮಗೆ ನ್ಯಾಯಾಲಯದಲ್ಲಿ ನಡೆದ ಅನಾಗರಿಕ ಕೆಲಸದ ಹಿಂದೆ ಸಂಘಟಿತ ಹಿಂಸೆಗೆ ಉನ್ಮತ್ತ ಮತೀಯತೆಯ ಕಾರಣವಿದೆ ಎಂಬುದು ಗೊತ್ತಾಗುತ್ತದೆ ಎಂದು ಮುಖಂಡರಾದ ಶ್ರೀನಿವಾಸಯ್ಯರವರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಛಲವಾದಿ ಮಹಾಸಭಾ ಮುಖಂಡರುಗಳಾದ ರಂಗಯ್ಯ (ರೆಡ್ಸ್), ಕಿಟ್ಟಿ (ಹೆಗ್ಗೆರೆ), ಚಂದ್ರು, ಸಿದ್ಧಲಿಂಗಯ್ಯ (ಗೌಡಿಹಳ್ಳಿ), ಛಲವಾದಿ ಶೇಖರ್, ಗಿರೀಶ್, ಸುರೇಶ್, ಅಪ್ಪಾಜಯ್ಯ, ಶಿವರಾಜ್ (ಅರಿಯೂರು), ಸಂಪತ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here