ಗುಬ್ಬಿ : ವಾಲ್ಮೀಕಿ ಸಮಾಜಕ್ಕೆ 21 ಕುಂಟೆ ಜಮೀನು ಮಂಜೂರು ಮಾಡಿದ್ದು, ಅದನ್ನು ಶೈಕ್ಷಣಿಕವಾಗಿ ಬಳಕೆಮಾಡಿದರೆ ಸಮಾಜವೂ ಶೈಕ್ಷಣಿಕವಾಗಿ ಮುಂಚೂಣಿಯಲ್ಲಿ ಸಾಗಲು ಸಾಧ್ಯವಾಗುತ್ತದೆ ಎಂದು ಶಾಸಕ ಎಸ್.ಆರ್ ಶ್ರೀನಿವಾಸ್ ತಿಳಿಸಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ತಾಲೂಕು ಆಡಳಿತ,ಸಮಾಜ ಕಲ್ಯಾಣ ಇಲಾಖೆ ಮತ್ತು ತಾಲೂಕಿನ ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಂಘ ಆಶ್ರಯದಲ್ಲಿ ಏರ್ಪಡಿಸಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಹಾನ್ ವ್ಯಕ್ತಿಗಳು ಸಮಾಜವನ್ನು ಪರಿವರ್ತನೆಯ ಮಾಡುವ ನಿಟ್ಟಿನಲ್ಲಿ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಆದ್ದರಿಂದ ಮಹಾನ್ ವ್ಯಕ್ತಿಗಳ ಜಯಂತಿಯನ್ನು ಆಚರಣೆ ಮಾಡಿಕೊಂಡು ಬರುತ್ತಿದ್ದೇವೆ. ಮಹಾನ್ ವ್ಯಕ್ತಿಗಳು ಒಂದು ಸಮಾಜಕ್ಕೆ ಮಾತ್ರ ಸೀಮಿತವಲ್ಲದೆ, ಎಲ್ಲಾ ಸಮಾಜದವರು ಅವರ ಜಯಂತಿಯನ್ನು ಆಚರಣೆ ಮಾಡಬೇಕು ಎಂದು ತಿಳಿಸಿದರು.
ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಜಿ.ಎನ್.ಅಣ್ಣಪ್ಪಸ್ವಾಮಿ ಮಾತನಾಡಿ, ಐದು ವರ್ಷಗಳಿಂದ ಕೋವಿಡ್ ಇದ್ದ ಕಾರಣ ಸರಳ ರೀತಿಯಲ್ಲಿ ಜಯಂತಿಯನ್ನು ಆಚರಣೆ ಮಾಡಲಾಗುತ್ತಿತ್ತು. ಇಂದು ಗುಬ್ಬಿ ತಾಲೂಕಿನ ನಾನಾ ಭಾಗಗಳಿಂದ ವಾಲ್ಮೀಕಿ ಜನಾಂಗದವರಿಗೆ ಜಯಂತಿಯ ಬಗ್ಗೆ ಮಾಹಿತಿ ನೀಡಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದಾರೆ. ಮಹರ್ಷಿ ವಾಲ್ಮೀಕಿ ಅವರು ಋಷಿಯಾಗಿ ಜ್ಞಾನ ಪಡೆದುಕೊಂಡು ನಂತರ ರಾಮಾಯಣ ಬರೆದು ಮುಂದಿನ ಯುವ ಸಮಾಜಕ್ಕೆ ಉತ್ತಮ ಸಂದೇಶ ನೀಡಿದ್ದಾರೆ ಎಂದರು.
ಶ್ರೀ ಮಹರ್ಷಿ ವಾಲ್ಮೀಕಿ ಅವರ ವಿಚಾರಧಾರೆಗಳ ಬಗ್ಗೆ ಕಡಬ ಕೆಪಿಎಸ್ ಶಾಲೆಯ ಸಹಶಿಕ್ಷಕ ಮುರಳಿಧರ್ ಎಚ್.ಆರ್ ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ಮಿಮಿಕ್ರಿ ಗೋಪಿ ಅವರಿಂದ ನಗೆಹಬ್ಬವನ್ನು ನಡೆಸಲಾಯಿತು.
ಇದೇ ಸಂದರ್ಭದಲ್ಲಿ ವಾಲ್ಮೀಕಿ ಸಮಾಜದ ನಿವೃತ್ತಿ ಹೊಂದಿದ ಅಧಿಕಾರಿಗಳಿಗೆ, ತಾಲೂಕಿನಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಗ್ಯಾರೆಂಟಿ ಯೋಜನೆಯ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ಆರ್. ವೆಂಕಟೇಶ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹೆಚ್.ಸಿ.ಗುರುಪ್ರಸಾದ್, ಗುಬ್ಬಿ ತಾಲೂಕು ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಂಘದ ತಾಲೂಕು ಅಧ್ಯಕ್ಷ ಜಿ.ಎನ್.ಅಡವೀಶಯ್ಯ, ತಾ. ಪಂ.ಮಾಜಿ ಸದಸ್ಯ ಸಣ್ಣರಂಗಯ್ಯ, ತಹಸೀಲ್ದಾರ್ ಬಿ.ಆರತಿ, ಇಒ ರಂಗನಾಥ್, ಪ.ಪಂ. ಮುಖ್ಯಾಧಿಕಾರಿ ಮಂಜುಳಾದೇವಿ, ಬಿಇಒ ಎಂ.ಎಸ್.ನಟರಾಜು, ಟಿ.ಹೆಚ್.ಒ ಬಿಂದು ಮಾಧವ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಬಿ.ಎಸ್.ವೀಣಾ, ಸಂಘದ ಪದಾಧಿಕಾರಿಗಳಾದ ರಾಮಚಂದ್ರಪ್ಪ, ಉಪಾಧ್ಯಕ್ಷ ನರಸಿಂಹಮೂರ್ತಿ, ರಘು , ಎಂಎಚ್ ಪಟ್ನಾ ದೇವರಾಜು, ರಂಗನಾಥ್, ಹೊಸಹಳ್ಳಿ ಚೇತನ್ ನಾಯಕ್, ಸೋಮಲಾಪುರ ಕೃಷ್ಣಮೂರ್ತಿ, ಮಂಚಲದೊರೆ ರಮೇಶ್, ಎಂಎನ್ ಕೋಟೆ ಪಾಂಡಪ್ಪ, ನಾಗರಾಜು ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ದಲಿತ ಮುಖಂಡರು, ಎಲ್ಲಾ ಇಲಾಖೆಯ ಮುಖ್ಯಸ್ಥರು ಉಪಸ್ಥಿತರಿದ್ದರು.