

ಗುಬ್ಬಿ: ಮಾದಕ ದ್ರವ್ಯ ಮುಕ್ತ ಸಮಾಜವನ್ನು ನಿರ್ಮಿಸುವ ಗುರಿಯನ್ನು ಸರ್ಕಾರ ಹೊಂದಿದ್ದು ವ್ಯಸನಿಗಳು ಅಪರಾಧಿಗಳಿಗಿಂತ ಹೆಚ್ಚಾಗಿ ರೋಗಿಗಳಾಗುತ್ತಿದ್ದಾರೆ ಎಂದು ಪ್ರಧಾನ ಕಿರಿಯ ಸಿವಿಲ್ ನ್ಯಾಯಾಧೀಶರಾದ ಎಸ್.ಪಿ.ಕಿರಣ್ ತಿಳಿಸಿದರು.
ಪಟ್ಟಣದ ಎಸ್.ಆರ್.ಎ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಅಭಿಯೋಜನಾ ಇಲಾಖೆ, ಅಬಕಾರಿ ಇಲಾಖೆ ಇವರ ಆಶ್ರಯದಲ್ಲಿ ಏರ್ಪಡಿಸಿದ್ದ ಮಾದಕ ವಸ್ತುಗಳು ಹಾಗೂ ಅಮೂಲು ಪದಾರ್ಥಗಳ ನಿಯಂತ್ರಣ ಕಾಯ್ದೆ ಬಗ್ಗೆ ಏರ್ಪಡಿಸಿದ್ದ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿ ದೇಶದ ಅತ್ಯಂತ ಬಲಿಷ್ಠ ಕಾಯಿದೆಗಳಲ್ಲಿ ಇದು ಒಂದಾಗಿದ್ದು ಮಾದಕ ವ್ಯಸನ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಈ ಕಾಯ್ದೆಯನ್ನು ಜಾರಿಗೆ ತರಲಾಗಿದೆ ಎಂದರು.

ಹದಿಹರೆಯ ವಯಸ್ಸಿನಲ್ಲಿ ವಿದ್ಯಾರ್ಥಿಗಳು ಚಂಚಲ ಮನಸ್ಸು ಹೊಂದುವುದು ಸಹಜ ಪ್ರಕ್ರಿಯೆ. ಆದರೆ ಅದನ್ನು ಹತೋಟಿಯಲ್ಲಿ ಇಟ್ಟುಕೊಳ್ಳುವ ಮನಸ್ಥಿತಿಯನ್ನು ನಿರ್ಮಿಸಿಕೊಳ್ಳುವುದು ವಿದ್ಯಾರ್ಥಿಗಳ ಕೈಯಲ್ಲಿ ಇರಲಿದ್ದು, ತಂತ್ರಜ್ಞಾನ ಬದಲಾದಂತೆ ಮನುಷ್ಯನು ಬದಲಾಗಬೇಕಾದದ್ದು ಪ್ರಕೃತಿಯ ನಿಯಮ. ಹಾಗಂತ ಒಳ್ಳೆಯ ಗುಣಗಳನ್ನು ಹೊಂದಿರುವ ವಿಚಾರಗಳನ್ನು ಗಾಳಿಗೆ ತೂರಿ ದುಶ್ಚಟಗಳಿಗೆ ಮಾರು ಹೋಗುವುದು ಸರಿಯಲ್ಲ. ಇತ್ತೀಚಿನ ದಿನಗಳಲ್ಲಿ ಮೊಬೈಲ್ ಬಳಕೆ ಎಷ್ಟರ ಮಟ್ಟಿಗೆ ವಾತಾವರಣ ನಿರ್ಮಾಣವಾಗಿದೆ ಎಂದರೆ ಮೊಬೈಲ್ ಇಲ್ಲದೇ ಜೀವನವೇ ಇಲ್ಲ ಎನ್ನುವಷ್ಟು ಮಟ್ಟಿಗೆ ಮನುಷ್ಯರು ಅವಲಂಬಿತರಾಗಿದ್ದಾರೆ. ಇದರಿಂದ ಮಾದಕ ವಸ್ತುಗಳ ಮೇಲೆ ಮಾರು ಹೋಗಿ ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುವ ಹಂತಕ್ಕೆ ಹೋಗಬಾರದು ಎಂದು ತಿಳಿಸಿದರು.
ಅಬಕಾರಿ ನಿರೀಕ್ಷಕ ಶೇಕ್ ಇಮ್ರಾನ್ ಮಾತನಾಡಿ,ಯಾವುದೇ ಒಬ್ಬ ವ್ಯಕ್ತಿ ದುಶ್ಚಟಗಳಿಗೆ ಬಲಿಯಾದರೆ ಮತ್ತೆ ಮತ್ತೆ ಅದೇ ಚಟವನ್ನು ಮಾಡಬೇಕು ಎಂಬುದು ಮನಸ್ಸಿನಲ್ಲಿ ಬರುವುದರಿಂದ ಅದಕ್ಕೆ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುವ ಬದಲು ಉತ್ತಮ ಅಭ್ಯಾಸಗಳನ್ನು ರೂಡಿಸಿಕೊಂಡು ನಿರಂತರ ಅಭ್ಯಾಸ ಮಾಡಿ ಸ್ಪರ್ಧಾತ್ಮಕ ಯುಗದಲ್ಲಿ ಉದ್ಯೋಗ ಗಳಿಸಲು ಮುಂದಾಗಬೇಕು. ಹೊಸ ವರ್ಷಕ್ಕೆ ದುಂದು ವೆಚ್ಚ ಮಾಡದೆ, ಮುಂದಿನ ಗುರಿಯನ್ನು ಇಟ್ಟುಕೊಂಡು ಅದರ ಬಗ್ಗೆ ಸಾಧಿಸಲು ಪ್ರಮಾಣ ಮಾಡುವ ಮೂಲಕ ಹೊಸ ವರ್ಷಕ್ಕೆ ಕಾಲಿಡಬೇಕು. ಓದುವ ಸಮಯದಲ್ಲಿ ಓದಿದರೆ ಮುಂದಿನ ಜೀವನವೂ ಸುಖಕರವಾಗಿರುತ್ತದೆ ಎಂದು ತಿಳಿಸಿದರು.
ಪ್ರಾಂಶುಪಾಲ ಸಿ. ಜಿ.ಸತೀಶ್ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯು ತಪ್ಪು ಮಾಡುವುದರಿಂದ ದೂರ ಇದ್ದು, ಸಜ್ಜನರ ಜೊತೆ ಸ್ನೇಹ ಮಾಡಿ ತಮ್ಮ ಭವಿಷ್ಯವನ್ನು ಉಜ್ವಲ ಗೊಳಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ವಿಶ್ವ ಭಾರತಿ ಎಜುಕೇಶನ್ ಸೊಸೈಟಿ ಸಂಸ್ಥಾಪಕ ಎನ್.ಮೂರ್ತಿ, ಸರ್ಕಾರಿ ವಕೀಲರಾದ ಶೋಭಾ, ವಕೀಲರ ಸಂಘದ ಉಪಾಧ್ಯಕ್ಷ ಸಿ.ಕೆ ರವೀಂದ್ರ, ಪ್ರಧಾನ ಕಾರ್ಯದರ್ಶಿ ಎಂ.ಪಿ ರವೀಶ್, ಪಪಂ ಮಾಜಿ ಸದಸ್ಯ ಶಿವಕುಮಾರ್, ಕಾರ್ಯದರ್ಶಿ ನಂದೀಶ್, ಪತಂಜಲಿ ಯೋಗ ಸಮಿತಿಯ ಸಂಚಾಲಕ ಮಹದೇವಪ್ಪ,
ಅಬಕಾರಿ ಉಪನಿರೀಕ್ಷಕರಾದ ಡೋಂಗಿ ಸಾಬ್ ಮುಜಾವರ್, ಟಿ.ಜನಾರ್ಧನ್ ಪೂಜಾರಿ, ಉಪನ್ಯಾಸಕರಾದ ಮಂಜುನಾಥ್, ಶಿವನಂಜಯ್ಯ, ಮಂಜುನಾಥ್, ನಾಗರಾಜು, ಜಯಮ್ಮ, ಸಿಬ್ಬಂದಿಗಳು, ವಿದ್ಯಾರ್ಥಿಗಳು ಮತ್ತಿತರರು ಇದ್ದರು.





