ಗುಬ್ಬಿ, : ನೂತನ ತಂತ್ರಜ್ಞಾನದಿಂದ ರೋಬೋಟ್ ಆವಿಷ್ಕಾರಗೊಂಡಿದ್ದು, ಮುಂದಿನ ತಲೆಮಾರಿನ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನದ ಇಲಾಖೆಯ ಸಲಹೆಗಾರ ಡಾ.ರಿಷಿ ಮೋಹನ್ ಭಟ್ನಾಕರ್ ತಿಳಿಸಿದರು.
ಪಟ್ಟಣದ ಹೊರವಲಯದ ಹೇರೂರು ಗ್ರಾಮದ ಶ್ರೀ ಚನ್ನಬಸವೇಶ್ವರ ತಾಂತ್ರಿಕ ಮಹಾವಿದ್ಯಾಲಯದ 25ನೇ ವರ್ಷದ ರಜತ ಮಹೋತ್ಸವ ಸ್ಥಾಪನಾ ದಿನಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, 1986ರಲ್ಲಿ ಕಂಪ್ಯೂಟರ್ ಪ್ರಾರಂಭವಾದ ಸಮಯದಲ್ಲಿ ಭಾರತದ ಎಲ್ಲಾರು ವಿರೋಧ ಮಾಡುತ್ತಿದ್ದರು. ಅಂದು ನ್ಯೂಸ್ ಪೇಪರ್ ನಲ್ಲಿ ಕಂಪ್ಯೂಟರ್ ವಿರೋಧದ ಸುದ್ದಿಗಳೇ ಕಾಣುತ್ತಿದ್ದವು.
ಇಂದು ಕಂಪ್ಯೂಟರ್ ಬಾರದಿದ್ದರೆ ಇಷ್ಟು ದೇಶಗಳು ಅಭಿವೃದ್ಧಿಯಾಗಲು ಸಾಧ್ಯವಾಗುತ್ತಿರಲಿಲ್ಲ.
ಮುಂಚೆ ತಾಂತ್ರಿಕತೆಯನ್ನು ಬೇರೆ ದೇಶಗಳಿಂದ ನಾವು ಪಡೆಯಬೇಕಾಗಿತ್ತು. ಈಗ ಬೇರೆ ದೇಶಕ್ಕಿಂತ ಭಾರತದಲ್ಲಿರುವ ತಾಂತ್ರಿಕತೆಯನ್ನು ನಾವು ಬೇರೆ ದೇಶದವರಿಗೆ ನೀಡುತ್ತಿದ್ದೇವೆ. ಜ್ಞಾನ ಪಡೆದಂತ ವಿದ್ಯಾರ್ಥಿಗಳ ಸೇವೆಯನ್ನು ಭಾರತ ಸರ್ಕಾರ ಪಡೆದುಕೊಂಡು ಭಾರತವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬೇಕು. ಕಂಪ್ಯೂಟರ್ ತಂತ್ರಜ್ಞಾನ ಇರುವುದರಿಂದ ರೈಲ್ವೆ ಇಲಾಖೆ, ಬ್ಯಾಂಕ್ ಸೇವೆಗಳನ್ನು ಉತ್ತಮ ರೀತಿಯಲ್ಲಿ ಒದಗಿಸಲು ಸಾಧ್ಯವಾಗಿದೆ.

ವ್ಯವಹಾರ, ವಿಜ್ಞಾನ ಹಾಗೂ ತಂತ್ರಜ್ಞಾನ ಇನ್ನು ಸಾಕಷ್ಟು ಬದಲಾವಣೆಯನ್ನು ಕಾಣಬೇಕಾಗಿದೆ. 1ನೇ ರೆವಲ್ಯೂಷನ್ ಕಾಣಬೇಕಾದರೆ 11ವರ್ಷಗಳು ಬೇಕಾಗಿತ್ತು, 2ನೇ ರೆವೊಲ್ಯೂಷನ್ ಆಗಬೇಕಾದರೆ 200 ವರ್ಷಗಳು ಬೇಕಾಗಿತ್ತು, 3ನೇ ರೆವೆಲ್ಯೂಷನ್ ಕಾಣಬೇಕಾದರೆ 20 ವರ್ಷ ಬೇಕಾಗಿದೆ . ಪ್ರಥಮ ಬಾರಿಗೆ ಗ್ರಾಮೀಣ ಪ್ರದೇಶದ ಕಾಲೇಜುಗಳಲ್ಲಿ ಫೈಜಿ ನೆಟ್ ವರ್ಕ್ ಬಳಕೆ ಮಾಡುತ್ತಿರುವುದು ಶ್ರೀ ಚನ್ನಬಸವೇಶ್ವರ ತಾಂತ್ರಿಕ ಮಹಾವಿದ್ಯಾಲಯ. ಸ್ಟಾರ್ಟ್ ಆಫ್ ಇಂಡಿಯಾ ಯೋಜನೆಗಳ ಅಭಿವೃದ್ಧಿಗೋಸ್ಕರ ವಿದ್ಯಾರ್ಥಿಗಳು ಜ್ಞಾನ ಪಡೆದುಕೊಳ್ಳಬೇಕಾಗಿದೆ. ಇಂತಹ ಜ್ಞಾನವನ್ನು ವಿದ್ಯಾರ್ಥಿಗಳು ಪಡೆದುಕೊಂಡು ದೇಶದ ಅಭಿವೃದ್ಧಿಗೆ ಸಹಕರಿಸಬೇಕು ಎಂದರು.
ಪದ್ಮಶ್ರೀ ಪುರಸ್ಕೃತ ಶ್ರೀ ಹರಿಕಾಲ ಅಜ್ಜಪ್ಪ, ಮಾತನಾಡಿ ನಾನು ವಿದ್ಯಾಭ್ಯಾಸಗೋಸ್ಕರ ಜಮೀನನ್ನು ಸರ್ಕಾರಕ್ಕೆ ಕೊಟ್ಟು ಆ ಜಾಗದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯಿಂದ ಕಾಲೇಜಿನವರೆಗೂ ವಿದ್ಯಾಭ್ಯಾಸ ನೀಡಲು ಪ್ರೋತ್ಸಾಹಿಸಿದ್ದೇನೆ. ಆದ್ದರಿಂದ ಸರ್ಕಾರ ನನಗೆ ಪದ್ಮಶ್ರೀ ನೀಡಿರುವುದರಿಂದ ಸರ್ಕಾರವನ್ನು ಸಹ ನಾನು ಗೌರವಿಸುತ್ತೇನೆ. ಇಂತಹ ದೊಡ್ಡ ವೇದಿಕೆಯಲ್ಲಿ ನನ್ನನ್ನು ಸನ್ಮಾನಿಸಿದ ಈ ಶಿಕ್ಷಣ ಸಮೂಹಕ್ಕೆ ತುಂಬು ಹೃದಯದ ಧನ್ಯವಾದಗಳು ಅರ್ಪಿಸುತ್ತೇನೆ ಎಂದರು.
ಸಿಐಟಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಜಿ.ಎಸ್.ಬಸವರಾಜು ಮಾತನಾಡಿ, ಕರ್ನಾಟಕ ರಾಜ್ಯ ಸರ್ಕಾರವು ಗುಬ್ಬಿ ತಾಲೂಕನ್ನು ಹಿಂದುಳಿದ ತಾಲೂಕ ಎಂದು ಗುರುತಿಸಲಾಯಿತು. ಇಂದು ಗುಬ್ಬಿ ತಾಲೂಕು ಕರ್ನಾಟಕ ರಾಜ್ಯದ ಶ್ರೀಮಂತ ತಾಲೂಕುಗಳಲ್ಲಿ 2ನೇ ತಾಲೂಕು ಆಗಿದೆ. ರೈತರ ಮಕ್ಕಳು, ಹೆಣ್ಣು ಮಕ್ಕಳು ವಿದ್ಯಾವಂತರಾಗಿ ಹೊರಹೊಮ್ಮುವ ನಿಟ್ಟಿನಲ್ಲಿ ನಮ್ಮ ಕಾಲೇಜು ಶಿಕ್ಷಣ ನೀಡುತ್ತಿದೆ. ರೈತರು ದ್ವೇಷ ಅಸೂಯೆ ಬಿಟ್ಟು ಒಗ್ಗಟ್ಟಾಗಿ ಅಭಿವೃದ್ಧಿ ನಿಟ್ಟಿನಲ್ಲಿ ಮುಂದಾಗಬೇಕು ಎಂದು ತಿಳಿಸಿದರು.
ಸಿಐಟಿ ಸಂಸ್ಥೆಯ ಕಾರ್ಯದರ್ಶಿ ಶಾಸಕ ಜಿ.ಬಿ.ಜ್ಯೋತಿ ಗಣೇಶ್ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಈ ಕಾಲೇಜು ಬೆಳ್ಳಿವರ್ಷದೆಡೆಗೆ ಸಾಗಲು ಶ್ರಮಿಸಿದ ಪ್ರತಿಯೊಬ್ಬರಿಗೂ ಅಭಿನಂದನೆ ಸಲ್ಲಿಸಿದರು. ತಂದೆ ಹಾಕಿಕೊಟ್ಟ ದಾರಿಯಲ್ಲಿ ನಾವು ನಡೆದು ಇನ್ನೂ ಉನ್ನತ ಮಟ್ಟಕ್ಕೆ ಈ ತಾಂತ್ರಿಕ ವಿದ್ಯಾಲಯವನ್ನು ಕೊಂಡೊಯ್ಯಬೇಕು ಎಂಬ ಕನಸು ಇದೆ ಎಂದು ತಿಳಿಸಿದರು.

ಕಾಲೇಜಿನ ನಿರ್ದೇಶಕ ಡಾ. ಡಿ.ಎಸ್.ಸುರೇಶ್ ಮಾತನಾಡಿ, ಶ್ರೀ ಚನ್ನಬಸವೇಶ್ವರ ತಾಂತ್ರಿಕ ಮಹಾವಿದ್ಯಾಲಯವು 2001ನೇ ವರ್ಷದಲ್ಲಿ ಸ್ಥಾಪನೆಯಾಗಿದ್ದು, ಇಲ್ಲಿಗೆ 25 ವರ್ಷಗಳನ್ನು ಪೂರೈಸುತ್ತಿದೆ. ಈ ಕಾಲೇಜಿನಲ್ಲಿ ಓದಿದ ವಿದ್ಯಾರ್ಥಿಗಳು ಉನ್ನತ ಹುದ್ದೆಗಳಲ್ಲಿ ತೊಡಗಿದ್ದು, ದೇಶವಿದೇಶದ ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗವನ್ನು ಮಾಡುತ್ತಿದ್ದಾರೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಆಶಾಕಿರಣವಾಗಿರುವ ಕಾಲೇಜು ಸಾವಿರಾರು ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ನೀಡುವ ಮೂಲಕ ರಾಜ್ಯದಲ್ಲಿ ಉತ್ತಮ ಹೆಸರುಗಳಿಸಿದೆ. ತುಮಕೂರು ಜಿಲ್ಲೆಯ ಗ್ರಾಮೀಣ ಭಾಗದ ಬಹುಪಾಲು ಇಂಜಿನಿಯರ್ ಪದವೀಧರರು ಸಿ.ಐ.ಟಿ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಆಗಿರುವುದು ಕಾಲೇಜಿನ ಗರಿಮೆಯೆನಿಸಿದೆ. ಈವರೆಗೆ 9,450 ಎಂಜಿನಿಯರಿಂಗ್ ಪದವೀಧರರು ಕಾಲೇಜಿನಿಂದ ತೇರ್ಗಡೆಯಾಗಿ ನಾಡಿಗೆ ಕೊಡುಗೆ ಯಾಗಿದ್ದಾರೆ ಎಂದು ತಿಳಿಸಿದರು.
ತುಮಕೂರು ಮರ್ಚೆಂಟ್ಸ್ ಕ್ರೆಡಿಟ್ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಡಾ. ಎನ್.ಎಸ್. ಜಯಕುಮಾರ್ ಮಾತನಾಡಿ ಓದಿದ ಎಲ್ಲಾ ವಿದ್ಯಾರ್ಥಿಗಳು ಸರ್ಕಾರಿ ಕೆಲಸವನ್ನು ನಂಬಿಕೊಳ್ಳದೆ ಇನ್ನೋವೇಶನ್ ಮೂಲಕ ಸ್ವಂತ ಕಂಪನಿಗಳನ್ನು ಪ್ರಾರಂಭಿಸಿ ನೀವೇ ನಾಲ್ಕಾರು ಜನರಿಗೆ ಕೆಲಸ ಕೊಡುವ ನಿಟ್ಟಿನಲ್ಲಿ ಮುಂದಾಗಬೇಕು. ನಮ್ಮ ನೆಲೆಯನ್ನ ನಾವೇ ಕಂಡುಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಭಾರತ ಸರ್ಕಾರದ ಮುಂಬೈ ವಾಣಿಜ್ಯ ಸಚಿವಾಲಯದ ಭಾರತೀಯ ರತ್ನಗಳು ಮತ್ತು ಆಭರಣ ಸಂಸ್ಥೆಯ ಹಿರಿಯ ಸಲಹೆಗಾರ ಡಾ. ಆನಂದ್ ಕೆ ಜೋಶಿ, ನಗರ ಪ್ರದೇಶದಲ್ಲಿದ್ದು ಓದಿರುವಂತ ವಿದ್ಯಾರ್ಥಿಗಳು ಪದವಿ ಪಡೆದುಕೊಳ್ಳುವುದು ಸುಲಭ. ಆದರೆ ಗ್ರಾಮೀಣ ಪ್ರದರ್ಶನದಲ್ಲಿ ಓದಿ ಇಂಜಿನಿಯರಿಂಗ್ ಪದವಿ ಪಡೆಯುತ್ತಿರುವುದು ಸುಲಭದ ಮಾತಲ್ಲ ಎಂದರು.
ಉಪ ಪ್ರಾಂಶುಪಾಲರಾದ ಡಾ.ಸಿ.ಪಿ ಶಾಂತಲಾ ಮುಖ್ಯ ಅತಿಥಿಗಳನ್ನು ಪರಿಚಯಿಸಿ ಸ್ವಾಗತ ಕೋರಿದರು. ಡಾ.ಅರುಣ್ ಹಿರಿಯಣ್ಣ, ಮೋನಿಷ್ ಮೊಲ್ಹೋತ್ರ, ಸಂಪಾದಕ ಎಸ್.ನಾಗಣ್ಣ, ಡಾ.ಮರಿಷ್ ಮಲಗೋರಿ, ಡಾ.ಶ್ರೀಧರ್ ಕೆ ಎನ್ ರಾವ್, ಸಿಐಟಿ ಕಾಲೇಜಿನ ಡೀನ್ ಡಾ.ಗಿರಿಧರ್.ಎಸ್. ಕುಲಕರ್ಣಿ, ಪಿ ಆರ್ ಓ ಎಸ್.ಆರ್.ಹರ್ಷ, ಡಾ.ಅನಿಲ್‌ಕುಮಾರ್, ಡಾ.ಜ್ಯೋತಿ, ಡಾ.ಚೇತನ್ ಬಾಲಾಜಿ, ಪ್ರೊ.ಜಿ.ಎಸ್.ಸುರೇಶ್, ವೀಣಾಕುಮಾರಿ, ಸುಧಿಕುಮಾರ್, ವಿ.ಸಿ.ಕುಮಾರ್, ಆನಂದ್‌ಕುಮಾರ್ ಸಿ.ಎಂ, ಬೋಧಕರಾಗಿರುವ ಉಪನ್ಯಾಸಕರು ಮತ್ತು ಮೋದಕೇತರ ವರ್ಗದವರು ವಿದ್ಯಾರ್ಥಿಗಳು ಪೋಷಕರು ಇತರರು ಉಪಸ್ಥಿತರಿದ್ದರು.





