ಗುಬ್ಬಿ : ಕಾನೂನಿನ ಮೂಲಕವೇ ಮಕ್ಕಳನ್ನು ದತ್ತು ಪಡೆದು ಪರಿಪಾಲನೆ ಮಾಡಬೇಕು. ಅನಧಿಕೃತವಾಗಿ ದತ್ತು ಪಡೆಯುವುದು ಅಪರಾಧ ಎಂದು ಗ್ರೇಡ್ 02 ತಹಶೀಲ್ದಾರ್ ಶಶಿಕಲಾ ತಿಳಿಸಿದರು
ಪಟ್ಟಣದ ತಾಲೂಕು ಕಚೇರಿಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ತುಮಕೂರು ಆಯೋಜಿಸಲಾಗಿದ್ದ ಅಂತರರಾಷ್ಟ್ರೀಯ ದತ್ತು ಮಾಸಾಚರಣೆ ಕಾರ್ಯಕ್ರಮದ ಜಾಥಾಕ್ಕೆ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿ ಮಾತನಾಡಿದ ಅವರು ತಮಗೆ ಬೇಕಾದವರ ಬಳಿ ಮಕ್ಕಳನ್ನು ದತ್ತು ಪಡೆದು ಸಾಕುತ್ತಿದ್ದರು. ಈಗ ಕಾನೂನು ಬದಲಾಗಿದೆ. ಎಲ್ಲವೂ ಕಾನೂನಿನ ಪ್ರಕಾರವೇ ಮಾಡಬೇಕಾಗಿದೆ. ಇತ್ತೀಚಿನ ದಿನಮಾನಗಳಲ್ಲಿ ಕೇವಲ ಸಂಬಂಧಿಕರ ತಮ್ಮ ಹತ್ತಿರದವರ ಮಕ್ಕಳನ್ನು ಮಾತ್ರವಲ್ಲದೆ ಅನಾಥ ಮಕ್ಕಳನ್ನು ದತ್ತು ಪಡೆಯುವ ಪ್ರಕ್ರಿಯೆ ಜಾರಿಗೆ ಬಂದಿದೆ. ಇದಕ್ಕೆ ಕಾನೂನಿನ ಪ್ರಕ್ರಿಯೆ ಅಗತ್ಯ ಎಂದು ತಿಳಿಸಿದರು.
ತಾಲೂಕು ವೈದ್ಯಾಧಿಕಾರಿ ಡಾ. ಬಿಂದು ಮಾಧವ ಮಾತನಾಡಿ ಮಕ್ಕಳನ್ನು ದತ್ತು ತೆಗೆದುಕೊಂಡು ಸಾಕುವುದು ಆ ಮಕ್ಕಳು ಮುಂದೆ ನಮಗೆ ಆಸರೆಯಾಗುವಂತೆ ಬೆಳೆಸುವುದು ಮಕ್ಕಳ ಪೋಷಣೆ ಒಳ್ಳೆಯ ವಿಚಾರ. ಅದು ಕಾನೂನಾತ್ಮಕವಾಗಿರಬೇಕು. ಅದರಿಂದ, ಮಗುವಿಗೂ ಪೋಷಕರಿಗೂ ಒಳ್ಳೆಯದು. ಯಾವುದೇ ಕಾರಣಕ್ಕೂ ಕಾನೂನು ಬಾಹಿರವಾಗಿ ಅನಧಿಕೃತವಾಗಿ ಮಕ್ಕಳನ್ನು ದತ್ತು ಪಡೆಯಬೇಡಿ. ನಾವು ಕಾನೂನು ಪ್ರಕಾರವೇ ಎಲ್ಲಾ ಕೆಲಸಗಳನ್ನು ಮಾಡಬೇಕು. ಕೆಲವೊಂದು ವೇಳೆ ತಪ್ಪುಗಳನ್ನು ಮಾಡಿದಾಗ ಕಾನೂನು ಗೊತ್ತಿರಲಿಲ್ಲ ಎನ್ನುತ್ತಾರೆ. ಇಂತಹ ತಪ್ಪುಗಳು ಮರುಕಳಿಸಬಾರದು ಎಂಬ ಕಾರಣಕ್ಕೆ ಅರಿವು ಮೂಡಿಸಲಾಗುತ್ತಿದೆ. ಎಲ್ಲರೂ ಕಾನೂನನ್ನು ಅರಿತು ಬಾಳಬೇಕು. ಆಗ ಯಾವುದೇ ತೊಂದರೆಗಳು ಎದುರಾಗುವುದಿಲ್ಲ. ಮಕ್ಕಳನ್ನು ದತ್ತು ತೆಗೆದುಕೊಳ್ಳುವ ವೇಳೆ ನಾವು ಕಾನೂನನ್ನು ಅನುಸರಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಕ್ಷಣಾಧಿಕಾರಿ ಗೌತಮ್, ಸಮಾಲೋಚಕ ರಶ್ಮಿ, ಸಮಾಜ ಕಾರ್ಯಕರ್ತೆ ಪಲ್ಲವಿ ಮಕ್ಕಳ ಸಹಾಯವಾಣಿ 1098 ಮೇಲ್ವಿಚಾರಕರಾದ ಸಿಂಧೂ, ಸಿಡಿಪಿಓ ಕೃಷ್ಣಮೂರ್ತಿ, ಉಪಸ್ಥಿತರಿದ್ದರು.





