ಗುಬ್ಬಿ- ನಿಟ್ಟೂರು ಜೋಡಿ ರೈಲು ಮಾರ್ಗ ರಾಷ್ಟ್ರ ಸಮರ್ಪಣೆ

ತುಮಕೂರು: ಗುಬ್ಬಿ-ನಿಟ್ಟೂರು ನಡುವಿನ 9 ಕಿಲೋಮೀಟರ್ ಜೋಡಿ ರೈಲು ಮಾರ್ಗವನ್ನು ಭಾನುವಾರ ರಾಷ್ಟ್ರಕ್ಕೆ ಸಮರ್ಪಿಸಲಾಯಿತು.

ಕೇಂದ್ರದ ರೈಲ್ವೆ, ವಾಣಿಜ್ಯ ಮತ್ತು ಕೈಗಾರಿಕೆ, ಗ್ರಾಹಕರ ವ್ಯವಹಾರ ಆಹಾರ ಮತ್ತು ನಾಗರಿಕ ಸರಬರಾಜು ಮಂತ್ರಿ ಪಿಯೂಷ್ ಗೋಯಲ್ ಅವರು ವಿಡಿಯೋ ಲಿಂಕ್ ಮೂಲಕ ಜೋಡಿ ಮಾರ್ಗವನ್ನು ಲೋಕಾರ್ಪಣೆ ಮಾಡಿದರು.

ಗೋಯಲ್ ಮಾತನಾಡಿ ಗುಬ್ಬಿ ನಿಟ್ಟೂರು ನಡುವೆ ಅನುಷ್ಠಾನ ವಾಗಿರುವ ಈ ಜೋಡಿ ಹಳಿ ನಿರ್ಮಾಣ ಕಾಮಗಾರಿಯು ಬೆಂಗಳೂರು-ಹುಬ್ಬಳ್ಳಿ ಮಾರ್ಗದಲ್ಲಿ ತುಮಕೂರು ಮತ್ತು ಅರಸೀಕೆರೆ (96 ಕಿಲೋಮೀಟರ್) ಹಳಿ ದ್ವಿಪಥೀಕರಣ ಯೋಜನೆಯ ಭಾಗವಾಗಿದೆ. ಈ ಯೋಜನೆಯನ್ನು 2015-16ರಲ್ಲಿ 783 ಕೋಟಿ ರೂ ವೆಚ್ಚದಲ್ಲಿ ಕೈಗೊಳ್ಳಲಾಗಿತ್ತು. ದ್ವಿಪಥೀಕರಣದಿಂದ ಬೆಂಗಳೂರಿನಿಂದ ಹುಬ್ಬಳ್ಳಿ ಬೆಳಗಾವಿ ಮುಂಬೈ ಮತ್ತಿತರ ಸ್ಥಳಗಳನ್ನು ಸಂಪರ್ಕಿಸುವ ಪ್ರಮುಖ ಮಾರ್ಗದ ಸಾಲಿನ ಸಾಮರ್ಥ್ಯ ಹೆಚ್ಚಾಗುತ್ತದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಅಂತರಸಂಪರ್ಕ ಅಭಿವೃದ್ಧಿಯಾಗುತ್ತದೆ ರೈಲುಗಳು ವೇಗವಾಗಿ ಚಲಿಸಲು ಸಹಾಯಕವಾಗುತ್ತದೆ 96 ಕಿಲೋಮೀಟರ್ ದೂರದ ಈ ದ್ವಿಪಥೀ ಕರಣ ಯೋಜನೆಯಲ್ಲಿ 74 ಕಿಲೋಮೀಟರ್ ನಷ್ಟು ಕಾಮಗಾರಿ ಈಗಾಗಲೇ ಅನುಷ್ಠಾನಗೊಂಡಿದೆ ಉಳಿದ ಕಾಮಗಾರಿಯು ಉತ್ತಮವಾಗಿ ಪ್ರಗತಿಯಲ್ಲಿದ್ದು ಬಾಣಸಂದ್ರ -ನಿಟ್ಟೂರು ನಡುವಿನ ಯೋಜನೆಯನ್ನು ಜೂನ್ ಮಾಹೆಯಲ್ಲಿ ಪೂರ್ಣಗೊಳಿಸಲಾಗುವುದು ಎಂದರು

ಇದೇ ಸಮಯದಲ್ಲಿ ಗುಬ್ಬಿ ರೈಲ್ವೆ ನಿಲ್ದಾಣದಲ್ಲಿ ಹಮ್ಮಿಕೊಂಡಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಜೆ ಸಿ ಮಧುಸ್ವಾಮಿ ಅವರು ಗುಬ್ಬಿ ನಿಟ್ಟೂರು ಜೋಡಿ ಮಾರ್ಗವನ್ನು ಲೋಕಾರ್ಪಣೆ ಮಾಡಿದ ರೈಲ್ವೆ ಸಚಿವರನ್ನು ಅಭಿನಂದಿಸಿದರು. ಮೀರಜ್ ಮಾರ್ಗದ ಈ ಜೋಡಿ ಹಳಿಯು ಅರಸಿಕೆರೆವರೆಗೂ ಇನ್ನೂ ೨೨ ಕಿಮೀ ನಿರ್ಮಾಣ ಕಾರ್ಯ ಪೂರ್ಣಗೊಂಡರೆ ಬೆಂಗಳೂರು-ಬೆಳಗಾಂ ಮಾರ್ಗವು ರಾಜ್ಯದ ಜನತೆಗೆ ಸದ್ಬಳಕೆಯಾಗುತ್ತದೆ ಎಂದರಲ್ಲದೆ ಚಿತ್ರದುರ್ಗ-ತಿಪಟೂರು ರೈಲು ಸಂಪರ್ಕ ನಿರ್ಮಿಸಿದರೆ ತುಮಕೂರಿನವರು ಮಂಗಳೂರು,ಮೈಸೂರಿಗೆ ಹೋಗಲು ಅನುಕೂಲವಾಗುತ್ತದೆ ಎಂದು ಸಚಿವರಲ್ಲಿ ಬೇಡಿಕೆಯಿಟ್ಟರು

ಬೆಂಗಳೂರಿನಿಂದ ತುಮಕೂರಿನವರೆಗೂ ಸಬರ್ಬನ್/ಮೆಟ್ರೊ ರೈಲು ಮಾರ್ಗವನ್ನು ವಿಸ್ತರಣೆ ಮಾಡಿದರೆ ತುಮಕೂರು-ಬೆಂಗಳೂರು ರಸ್ತೆಯ ವಾಹನ ಸಂಚಾರ ದಟ್ಟಣೆ ಕಡಿಮೆ ಆಗುವುದಲ್ಲದೆ ಪ್ರತಿದಿನ ಪ್ರಯಾಣಿಸುವವರಿಗೆ ಪ್ರಯೋಜನವಾಗುತ್ತದೆ ಎಂದು ಸಲಹೆ ನೀಡಿದರು. ಜೊತೆಗೆ ರೈಲ್ವೆ ಅಂಡರ್ ಪಾಸ್ ಮತ್ತು ಲೆವೆಲ್ ಕ್ರಾಸಿಂಗ್ ನಲ್ಲಿ ಸಮಸ್ಯೆಗಳಿದ್ದು ನಿವಾರಿಸಲು ರೈಲ್ವೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದರು

ಸಂಸದ ಜಿ.ಎಸ್ ಬಸವರಾಜು ಮಾತನಾಡಿ ನೆನೆಗುದಿಗೆ ಬಿದ್ದಿರುವ ರೈಲ್ವೆ ಕಾಮಗಾರಿ ಗಳನ್ನು ಆದಷ್ಟು ಬೇಗ ಕೈಗೆತ್ತಿಕೊಂಡು ಪೂರ್ಣ ಗೊಳಿಸಬೇಕೆಂದು ಸಚಿವರಲ್ಲಿ ಮನವಿ ಮಾಡಿದರು. ತುಮಕೂರಿನವರೆಗೂ ಇರುವ ರೈಲು ಮಾರ್ಗದ ವಿದ್ಯುದೀಕರಣ ಸೌಲಭ್ಯವನ್ನು ಅರಸೀಕೆರೆ ವರೆಗು ವಿಸ್ತರಿಸಬೇಕೆಂದು ಬೇಡಿಕೆ ಇಟ್ಟರು

ದಾವಣಗೆರೆ-ತುಮಕೂರು,ರಾಯದುರ್ಗ-ತುಮಕೂರು ರೈಲು ಮಾರ್ಗವನ್ನು ಆದಷ್ಟು ಶೀಘ್ರವಾಗಿ ಪೂರ್ಣಗೊಳಿಸಬೇಕು ಎಂದರಲ್ಲದೆ ಕೋವಿಡ್ ೧೯ ಕಾರಣದಿಂದ ಪ್ಯಾಸೆಂಜರ್ ಟ್ರೈನ್ ಅನ್ನು ಸ್ಥಗಿತಗೊಳಿಸಿರುವುದರಿಂದ ಪ್ರಯಾಣಿಕರಿಗೆ ತೊಂದರೆ ಯಾಗಿರುವುದರಿಂದ ಪ್ರಯಾಣಿಕರ ಅನುಕೂಲ ಕ್ಕಾಗಿ ಆದಷ್ಟು ಬೇಗ ಪ್ಯಾಸೆಂಜರ್ ರೈಲು ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಬೆಂಗಳೂರಿನ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅಶೋಕ್ ಕುಮಾರ್ ವರ್ಮಾ, ಮುಖ್ಯ ಆಡಳಿತಾಧಿಕಾರಿ (ನಿರ್ಮಾಣ) ಕೆ.ಸಿ ಸ್ವಾಮಿ, ಗುಬ್ಬಿ ಪಟ್ಟಣ ಪಂಚಾಯತಿ ಅಧ್ಯಕ್ಷ ಅಣ್ಣಪ್ಪ ಸ್ವಾಮಿ ಉಪಸ್ಥಿತಿ ಇದ್ದರು

Leave a Reply

Your email address will not be published. Required fields are marked *

error: Content is protected !!