ಮನೆಯ ತ್ಯಾಜ್ಯ,ಮಳೆ ನೀರು ಯುಜಿಡಿ ಸಂಪರ್ಕ ಕೂಡಲೇ ತೆರವುಗೊಳಿಸದಿದ್ದರೆ 10 ಸಾವಿರ ದಂಡ: ಪಾಲಿಕೆ ಸೂಚನೆ.


ತುಮಕೂರು : ಪಾಲಿಕೆಯ ಎಲ್ಲಾ ವಾರ್ಡುಗಳ ವ್ಯಾಪ್ತಿಯ ನಾಗರೀಕರು ಸಾರ್ವಜನಿಕ ಚರಂಡಿ ಹಾಗೂ ರಾಜ ಕಾಲುವೆಗಳಿಗೆ ಮಾತ್ರ ತಮ್ಮ ಮನೆ,ವಾಣಿಜ್ಯ ಸಂಕೀರ್ಣ,ಹಾಸ್ಟೆಲ್ವ,ಸತಿಗೃಹ ಇನ್ನಿತರೆ ಕಟ್ಟಡಗಳ ತಾಜ್ಯ ನೀರು,ಮಳೆ ನೀರಿನ ಸಂಪರ್ಕಗಳನ್ನು ನೀಡಬೇಕೆಂದು ತುಮಕೂರು ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ ಮನವಿ ಮಾಡಿದ್ದಾರೆ.

ಕಾಲುವೆ ಹಾಗೂ ಚರಂಡಿ ಸೇರಬೇಕಾದ ಜಲತ್ಯಾಜ್ಯವನ್ನು ಯು.ಜಿ.ಡಿ. ಸಂಪರ್ಕಕ್ಕೆ ಬಿಡುತ್ತಿರುವುದರಿಂದ ಮಳೆ ಹಾಗೂ ಇನ್ನಿತರ ಸಂದರ್ಭಗಳಲ್ಲಿ ಸದರಿ ಜಲತ್ಯಾಜ್ಯವು ಯು.ಜಿ.ಡಿ. ಛೇಂಬರ್‌ಗಳನ್ನು ತಲುಪಿ ಹಲವಾರು ಮನೆ, ತೊಟ್ಟಿಗಳಿಗೆ ಯು.ಜಿ.ಡಿ ಮಿಶ್ರಿತ ಕಲುಷಿತ ನೀರು ನುಗ್ಗಿ ಸಾರ್ವಜನಿಕರಿಗೆ ತೊಂದರೆಗಳು ಉಂಟಾಗುತ್ತಿರುವುದರಿಂದ ಸಾರ್ವಜನಿಕರು ತಮ್ಮ ಜವಾಬ್ದಾರಿಗಳನ್ನು ಅರಿತು ಎಲ್ಲಾ ತ್ಯಾಜ್ಯನೀರು/ ಮಳೆನೀರು ಸಂಪರ್ಕವನ್ನು ಕಡ್ಡಾಯವಾಗಿ ಸಾರ್ವಜನಿಕ ಚರಂಡಿ ಅಥವಾ ರಾಜಗಾಲುವೆಗಳಿಗೆ ನೀಡಬೇಕು. ಅದೇ ರೀತಿ ಹಾಲಿ ಚಾಲ್ತಿಯಲ್ಲಿರುವ ಯು.ಜಿ.ಡಿ.ಗೆ ನೀಡಿರುವ ತ್ಯಾಜ್ಯನೀರು, ಮಳೆನೀರಿನ ಸಂಪರ್ಕವನ್ನು ಕಡಿತಗೊಳಿಸಬೇಕು.

ಶೌಚಾಲಯದ ತ್ಯಾಜ್ಯವನ್ನು ವಿಲೇವಾರಿ ಮಾಡುವ ಸಲುವಾಗಿ ಯು.ಜಿ.ಡಿ.ಯನ್ನು ನಿರ್ಮಿಸಲಾಗಿದೆ. ಅವೈಜ್ಞಾನಿಕ ಸಂಪರ್ಕಗಳಿಂದ ಹೊರಬರುವ ಜಲತ್ಯಾಜ್ಯಗಳನ್ನು ವಿಲೇವಾರಿ ಮಾಡುವುದಕ್ಕಲ್ಲ. ಶೌಚಾಲಯ ತ್ಯಾಜ್ಯವನ್ನು ಹೊರತುಪಡಿಸಿ ಇತರೆ ಜಲತ್ಯಾಜ್ಯವನ್ನು ವಿಲೇವಾರಿ ಮಾಡಲು ಮಳೆ ನೀರಿನ ಕಾಲುವೆಗಳು, ಚರಂಡಿಗಳನ್ನು ನಿರ್ಮಿಸಲಾಗಿದ್ದು, ಅದನ್ನು ಸದ್ಬಳಕೆ ಮಾಡಿಕೊಂಡು ವ್ಯವಸ್ಥಿತ ರೀತಿಯಲ್ಲಿ ತ್ಯಾಜ್ಯವನ್ನು ವಿಲೇವಾರಿ ಮಾಡಿ ನಗರದ ಸ್ವಚ್ಚತೆ ಹಾಗೂ ಸಾರ್ವಜನಿಕರ ಆರೋಗ್ಯವನ್ನು ಕಾಪಾಡುವುದು ಎಲ್ಲರ ಕರ್ತವ್ಯವಾಗಿದೆ.

ಕಳೆದ ಗುರುವಾರದಿಂದ ಸುರಿಯುತ್ತಿರುವ ಅಕಾಲಿಕ ಮಳೆಯಿಂದಾಗಿ ನೂರಾರು ನಾಗರೀಕರಿಗೆ ಈ ಅವೈಜ್ಞಾನಿಕ ಸಂಪರ್ಕಗಳಿಂದ ತೀವ್ರತರವಾದ ಸಮಸ್ಯೆಗಳು ಉದ್ಭವಿಸಿದೆ. ಮುಂದಿನ ಮಳೆಗಾಲಕ್ಕೂ ಮುನ್ನ ಈ ಸಮಸ್ಯೆಗಳು ಪುನರಾವರ್ತಿತಗೊಳ್ಳದಂತೆ ತಡೆಯುವುದು ಮಹಾನಗರಪಾಲಿಕೆಯ ಆದ್ಯ ಕರ್ತವ್ಯವಾಗಿದ್ದು, ಸಾರ್ವಜನಿಕರು ಪಾಲಿಕೆಯೊಂದಿಗೆ ಸಹಕರಿಸಬೇಕು. ಈ ಹಿನ್ನೆಲೆಯಲ್ಲಿ ೨೦೨೧ರ ಮಾರ್ಚ್ ೩೧ರೊಳಗಾಗಿ ಜಲತ್ಯಾಜ್ಯದ ಅವೈಜ್ಞಾನಿಕ ಸಂಪರ್ಕಗಳನ್ನು ಕಡಿತಗೊಳಿಸಿ ಪಾಲಿಕೆಯ ಆದೇಶಕ್ಕೆ ಸಹಕರಿಸಬೇಕಾಗಿ ವಿನಂತಿ. ತಪ್ಪಿದ್ದಲ್ಲಿ ಅಂತವರ ವಿರುದ್ಧ ಕರ್ನಾಟಕ ಮುನ್ಸಿಪಲ್ ಕಾರ್ಪೋರೇಷನ್ ೧೯೭೬ ನಿಯಮದ ಪ್ರಕಾರ ಕ್ರಮಕೈಗೊಳ್ಳಲಾಗುವುದು ಹಾಗೂ 10 ಸಾವಿರ ರೂ.ಗಳ ದಂಡ ವಿಧಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!